newsics.com
ನಮ್ಮಲ್ಲಿ ಕೆಲವರು ಒಮ್ಮೆಗೆ ಇಡೀ ವರ್ಷಕ್ಕೆ ಮೊಬೈಲ್ ರೀಚಾರ್ಜ್ ಅನ್ನು ಮಾಡಿಸುತ್ತಾರೆ. ಇನ್ನೂ ಕೆಲವರು ಪ್ರತಿ ತಿಂಗಳಿಗೊಮ್ಮೆ ಮೊಬೈಲ್ ರಿಚಾರ್ಜ್ ಮಾಡಿಸುತ್ತಾರೆ. ಆದರೆ, ತಿಂಗಳಿಗೊಮ್ಮೆ ರಿಚಾರ್ಜ್ ಯೋಜನೆಯಲ್ಲಿ ತಿಂಗಳಿಡೀ ಎಂದರೆ 30 ದಿನಗಳ ಮಾನ್ಯತೆ ಲಭ್ಯವಿರುವುದಿಲ್ಲ. ಬದಲಿಗೆ ಕೇವಲ 28ದಿನಗಳವರೆಗೆ ಮಾತ್ರ ವ್ಯಾಲಿಡಿಟ್ಟು ಮಾತ್ರ ಇತ್ತು. ಆದರೆ ಇನ್ಮುಂದೆ 30 ದಿನಗಳ ರೀಚಾರ್ಜ್ ಪ್ಲಾನ್ ಬರಲಿದೆ.
ನೀವು ಪ್ರತಿ ತಿಂಗಳು 28 ದಿನಗಳ ಪ್ಲಾನ್ ಹಾಕಿಸಿದರೆ, ವರ್ಷದ ಕೊನೆಯಲ್ಲಿ ಸುಮಾರು 24 ರಿಂದ 30 ದಿನಗಳು ಉಳಿಯುತ್ತವೆ. ಅಂದರೆ, ನೀವು ವರ್ಷಕ್ಕೆ 12 ಬಾರಿ ರೀಚಾರ್ಜ್ ಮಾಡುವ ಬದಲು ಅರಿಯದೆಯೇ 13 ಬಾರಿ ರೀಚಾರ್ಜ್ ಮಾಡುತ್ತಿದ್ದೀರಿ ಎಂದರ್ಥ. ಇದು ಕೋಟ್ಯಂತರ ಗ್ರಾಹಕರಿಂದ ಟೆಲಿಕಾಂ ಕಂಪನಿಗಳು ಪಡೆಯುವ ಸಾವಿರಾರು ಕೋಟಿ ರೂಪಾಯಿಗಳ ಹೆಚ್ಚುವರಿ ಲಾಭ.
ಈ ಅನ್ಯಾಯದ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದರು. ಆದರೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು ಸಂಸದ ರಾಘವ್ ಚಡ್ಡಾ. ಟೆಲಿಕಾಂ ಕಂಪನಿಗಳ ಈ ರೀಚಾರ್ಜ್ ನೀತಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಅವರು ವಾದಿಸಿದ್ದರು. “ಜನರಿಗೆ ಒಂದು ತಿಂಗಳ ಸಂಬಳ ಸಿಗುವುದು 30 ದಿನಗಳಿಗೊಮ್ಮೆ, ಹಾಗಿರುವಾಗ ರೀಚಾರ್ಜ್ ಪ್ಲಾನ್ ಮಾತ್ರ 28 ದಿನಕ್ಕೆ ಯಾಕೆ?” ಎನ್ನುವ ಅವರ ಪ್ರಶ್ನೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ರಾಘವ್ ಚಡ್ಡಾ ಅವರ ಈ ಹೋರಾಟ ಮತ್ತು ಸಾರ್ವಜನಿಕರ ಒತ್ತಾಯದ ನಂತರ, ಈಗ ಕೇಂದ್ರ ಸರ್ಕಾರ ಮತ್ತು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಟೆಲಿಕಾಂ ಕಂಪನಿಗಳು ಕಡ್ಡಾಯವಾಗಿ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಅನ್ನು ಗ್ರಾಹಕರಿಗೆ ನೀಡಲೇಬೇಕು ಎಂದು ಆದೇಶಿಸಲಾಗಿದೆ.
ಇದರ ಪ್ರಮುಖ ಅಂಶಗಳು ಇಲ್ಲಿವೆ:
ಕ್ಯಾಲೆಂಡರ್ ತಿಂಗಳ ಪ್ಲಾನ್: ಇನ್ಮುಂದೆ ಪ್ರತಿ ಕಂಪನಿಯೂ ಕನಿಷ್ಠ ಒಂದು ಪ್ಲಾನ್ ಆದರೂ ‘ಕ್ಯಾಲೆಂಡರ್ ಮಂತ್’ (ಅಂದರೆ ನೀವು ಈ ತಿಂಗಳ 5ನೇ ತಾರೀಕು ರೀಚಾರ್ಜ್ ಮಾಡಿದರೆ ಮುಂದಿನ ತಿಂಗಳ 5ನೇ ತಾರೀಕಿನವರೆಗೆ) ವ್ಯಾಲಿಡಿಟಿ ಹೊಂದಿರಬೇಕು.
ಗೊಂದಲಕ್ಕೆ ತೆರೆ: ರೀಚಾರ್ಜ್ ಯಾವಾಗ ಮುಗಿಯುತ್ತದೆ ಎಂಬ ಗೊಂದಲ ಇನ್ಮುಂದೆ ಇರುವುದಿಲ್ಲ. ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿದರೆ ಸಾಕು.
ಹಣ ಉಳಿತಾಯ: ವರ್ಷಕ್ಕೆ ಒಂದು ಹೆಚ್ಚುವರಿ ರೀಚಾರ್ಜ್ ಮಾಡುವ ಅವಶ್ಯಕತೆ ತಪ್ಪುವುದರಿಂದ ಗ್ರಾಹಕರಿಗೆ ನೇರವಾದ ಆರ್ಥಿಕ ಲಾಭವಾಗಲಿದೆ.
ಈ ಮೊದಲೇ ಹೇಳಿದಂತೆ, ಕಂಪನಿಗಳಿಗೆ ಇದು ಲಾಭದ ದೃಷ್ಟಿಯಿಂದ ಸ್ವಲ್ಪ ಹಿನ್ನಡೆಯಾಗಬಹುದು. ಆದರೆ ಗ್ರಾಹಕರ ಹಿತದೃಷ್ಟಿಯಿಂದ ಇದು ಅತ್ಯಂತ ಅಗತ್ಯವಾದ ಕ್ರಮವಾಗಿತ್ತು. ಈಗಾಗಲೇ ಜಿಯೋ, ಏರ್‌ಟೆಲ್ ಮತ್ತು ವಿಐ (Vi) ನಂತಹ ಕಂಪನಿಗಳು ತಮ್ಮ ಪ್ಲಾನ್‌ಗಳ ಪಟ್ಟಿಯಲ್ಲಿ 30 ದಿನಗಳ ಮತ್ತು ಪೂರ್ತಿ ಒಂದು ತಿಂಗಳ ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಸೇರಿಸಲು ಶುರು ಮಾಡಿವೆ.
https://www.newsics.com/2026/03/30/husband-rapes-young-woman-inside-room-wife-guards-outside/