https://youtube.com/shorts/Uyg7eLAiO4c?si=HGl_mdjplGhkcNCz
newsics.com
ಹಾರ್ಮುಜ್ ಜಲಸಂಧಿಯಿಂದ ಎಲ್ಪಿಜಿ ಗ್ಯಾಸ್ ಹೊತ್ತ ಎರಡನೇ ಹಡಗೊಂದು ಭಾರತವನ್ನು ತಲುಪಿದೆ. 45,000 ಮೆಟ್ರಿಕ್ ಟನ್ ಎಲ್ಪಿಜಿ ಹೊಂದಿರುವ ನಂದಾದೇವಿ ಎನ್ನುವ ಹಡಗು ಇಂದು ಗುರುವಾರ ಗುಜರಾತ್ನ ವಡಿನಾರ್ ಬಂದರನ್ನು ತಲುಪಿದೆ. ಮೂಲ ಯೋಜನೆ ಪ್ರಕಾರ ಈ ಹಡಗು ಕಾಂಡ್ಲಾ ಪೋರ್ಟ್ ತಲುಪಬೇಕಿತ್ತು.
ಆದರೆ, ಕಾರಣಾಂತರದಿಂದ ವಡಿನಾರ್ ಕಡೆಗೆ ತಿರುಗಿಸಲಾಯಿತು.
ಇರಾನ್ ಯುದ್ಧ ಶುರುವಾದಾಗಿನಿಂದ ಹಾರ್ಮುಜ್ ಜಲಸಂಧಿಗೆ ತಡೆಯಾಗಿದೆ. ಆದರೆ, ಭಾರತ ನಡೆಸಿದ ಮಾತುಕತೆಯ ಫಲವಾಗಿ ಇರಾನ್ ದೇಶವು ಹಾರ್ಮುಜ್ ಜಲಸಂಧಿಯಿಂದ ಈವರೆಗೆ ಮೂರು ಭಾರತೀಯ ಟ್ಯಾಂಕರ್ಗಳಿಗೆ ಸಾಗಲು ಅನುಮತಿಸಿದೆ. ಶಿವಾಲಿಕ್ ಎನ್ನುವ ಹಡಗು ನಿನ್ನೆ ಗುಜರಾತ್ನ ಮುಂದ್ರಾ ಪೋರ್ಟ್ ತಲುಪಿದೆ. ಅದು ಸುಮಾರು 45,000 ಟನ್ ಎಲ್ಪಿಜಿ ಗ್ಯಾಸ್ ಹೊತ್ತು ಬಂದಿದೆ. ಇವತ್ತು ನಂದಾದೇವಿ ಹಡಗು ಆಗಮಿಸಿದೆ. ಇಲ್ಲಿಗೆ ಎರಡು ಹಡಗುಗಳು ಭಾರತದ ತೀರವನ್ನು ತಲುಪಿದಂತಾಗಿದೆ. ಇನ್ನೊಂದು ಹಡಗು ಒಂದೆರಡು ದಿನದಲ್ಲಿ ತಲುಪುವ ನಿರೀಕ್ಷೆ ಇದೆ. ಜಗ್ ಲಾಡ್ಕಿ ಎನ್ನುವ ಈ ಹಡಗು ಕೂಡ ಮುಂದ್ರಾ ಪೋರ್ಟ್ಗೆ ಬರುವ ನಿರೀಕ್ಷೆ ಇದೆ.
ಹಾರ್ಮುಜ್ ಜಲಸಂಧಿಯಲ್ಲಿ ಇನ್ನೂ 22 ಭಾರತೀಯ ಹಡಗುಗಳು ಅನುಮತಿಗಾಗಿ ಕಾದು ನಿಂತಿವೆ. ಈ 22 ಹಡಗುಗಳಲ್ಲಿ 611 ಭಾರತೀಯ ನಾವಿಕರಿದ್ದಾರೆ ಎಂದು ಸರ್ಕಾರದ ದತ್ತಾಂಶ ಹೇಳುತ್ತಿದೆ. ಈಗ ಒಂದೊಂದೇ ಹಡಗನ್ನು ಹೊರತರಿಸಲು ಭಾರತ ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ಇರಾನ್ನ ಮನವೊಲಿಸುವ ಪ್ರಯತ್ನಗಳಾಗುತ್ತಿವೆ.
ಎಲ್ಪಿಜಿ ಬಿಕ್ಕಟ್ಟಿನಲ್ಲಿ ಭಾರತ
ಹಾರ್ಮುಜ್ ಜಲಸಂಧಿ ನಿರ್ಬಂಧಿತವಾಗಿರುವುದರಿಂದ ಜಾಗತಿಕವಾಗಿ ತೈಲ ಮತ್ತು ಅನಿಲಗಳ ಬೆಲೆ ಗಗನಕ್ಕೇರಿದೆ. ಎರಡೂ ಪೂರೈಕೆಗಳಿಗೆ ವ್ಯತ್ಯಯ ಆಗಿದೆ. ಭಾರತಕ್ಕೆ ಪೆಟ್ರೋಲ್, ಡೀಸಲ್ಗಿಂತ ಎಲ್ಪಿಜಿ ಬಿಕ್ಕಟ್ಟು ಹೆಚ್ಚು ತೀವ್ರತೆಯಲ್ಲಿದೆ. ಭಾರತ ಆಮದು ಮಾಡಿಕೊಳ್ಳುವ ಎಲ್ಪಿಜಿಯಲ್ಲಿ ಬಹುತೇಕ ಭಾಗವು ಹಾರ್ಮುಜ್ ಜಲಸಂಧಿ ಮೂಲಕ ಸಾಗಣೆ ಆಗುತ್ತದೆ. ಹೀಗಾಗಿ, ಎಲ್ಪಿಜಿ ಬಿಕ್ಕಟ್ಟು ಹೆಚ್ಚಾಗಿದೆ.
ಭಾರತವು ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ನೈಸರ್ಗಿಕ ಅನಿಲದಲ್ಲಿ ಅರ್ಧದಷ್ಟನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ಉಳಿದ ಅರ್ಧವನ್ನು ಬೇರೆ ಬೇರೆ ಭಾಗಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ, ಎಲ್ಪಿಜಿ ಗ್ಯಾಸ್ಗೆ ಗಲ್ಫ್ ಮೇಲೆ ಅವಲಂಬನೆ ಹೆಚ್ಚಿರುವುದು ಭಾರತಕ್ಕೆ ಸ್ವಲ್ಪ ಇಕ್ಕಟ್ಟಿನ ಸ್ಥಿತಿ ತಂದಿದೆ.