https://youtube.com/shorts/NQT6o3FTgxQ?si=QO7iNw2quSngYXpc
newsics.com
ಬೇಸಿಗೆ ಕಾಲ ಶುರುವಾದಂತೆ ಚರ್ಮದ ಸಮಸ್ಯೆಗಳು ಕೂಡ ಹೆಚ್ಚಾಗುತ್ತವೆ. ಏಕೆಂದರೆ ಈ ಸಂದರ್ಭದಲ್ಲಿ ಅಧಿಕ ತಾಪಮಾನ, ವಿಪರೀತ ಸೂರ್ಯನ ಬಿಸಿಲು ಚರ್ಮಕ್ಕೆ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಒಂದು ವೇಳೆ ಇಂತಹ ಸಮಯದಲ್ಲಿ ಚರ್ಮದ ಆರೈಕೆ ಮಾಡಿಕೊಳ್ಳದೆ ಹೋದರೆ ಚರ್ಮ ಒಣಗಿ ಹೋಗುತ್ತದೆ ಮತ್ತು ತನ್ನ ಸಂವೇದನೆ ಕಳೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಚರ್ಮಕ್ಕೆ ವಿಶೇಷವಾದ ಆರೈಕೆ ಅಗತ್ಯವಿದೆ.
ಅಸ್ತಮಾ, ಶ್ವಾಸಕೋಶದ ಸಮಸ್ಯೆಗಳು, ಚರ್ಮದ ಕಾಯಿಲೆಗಳು, ಕಾಲರಾ, ಅತಿಸಾರ, ಬಿಸಿಲ ಏಟು ಮತ್ತು ನಿರ್ಜಲೀಕರಣದಂತಹ ಸಮಸ್ಯೆಗಳು ಈ ಸಮಯದಲ್ಲಿ ಕಾಡುವುದು ಹೆಚ್ಚು. ಇವುಗಳಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹೀಗಿವೆ:
ಪ್ರಮುಖ ಆರೋಗ್ಯ ಸಮಸ್ಯೆಗಳು
ಶೋಭೆ ಮಚ್ಚೆಗಳು (Tinea Versicolor): ಈಗಾಗಲೇ ಶೋಭೆ ಮಚ್ಚೆಗಳ ಸಮಸ್ಯೆ ಇರುವವರಿಗೆ ಬೇಸಿಗೆಯಲ್ಲಿ ಇದು ಮತ್ತಷ್ಟು ಹೆಚ್ಚಾಗುತ್ತದೆ. ತಾಪಮಾನ ಏರಿದಾಗ ಫಂಗಸ್ ವೇಗವಾಗಿ ಹರಡುವುದರಿಂದ ಮಚ್ಚೆಗಳು ದೊಡ್ಡದಾಗುತ್ತವೆ ಮತ್ತು ಬೆವರಿನ ಕಾರಣದಿಂದ ಆ ಜಾಗದಲ್ಲಿ ಉರಿ ಕಾಣಿಸಿಕೊಳ್ಳಬಹುದು. ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಇದನ್ನು ತಡೆಯಬಹುದು.
ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ಅತಿಯಾಗಿ ಬೆವರು ಹರಿಯುತ್ತದೆ. ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮದ ಕೋಶಗಳು ಹಾನಿಗೊಳಗಾಗುತ್ತವೆ. ಬೆವರಿನಿಂದಾಗಿ ಚರ್ಮದಲ್ಲಿ ತೇವಾಂಶ ಹೆಚ್ಚಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಸೋಂಕುಗಳು ಉಂಟಾಗುತ್ತವೆ. ಇದು ಚರ್ಮದ ಊತ ಮತ್ತು ಅಲರ್ಜಿಗೆ ಕಾರಣವಾಗಬಹುದು.
ಅಸ್ತಮಾ ರೋಗಿಗಳು ಬೇಸಿಗೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಬಿಸಿ ಗಾಳಿಯು ತೇವಾಂಶವನ್ನು ಹೆಚ್ಚು ಹಿಡಿದಿಟ್ಟುಕೊಳ್ಳುವುದರಿಂದ ಸೂಕ್ಷ್ಮಜೀವಿಗಳು ಮತ್ತು ಮಾಲಿನ್ಯಕಾರಕಗಳು ಗಾಳಿಯಲ್ಲಿ ವೇಗವಾಗಿ ಹರಡುತ್ತವೆ. ಇದು ಉಸಿರಾಟದ ತೊಂದರೆಯನ್ನು ಹೆಚ್ಚಿಸುತ್ತದೆ. ಹೊರಗಡೆ ಹೋಗುವಾಗ ಇವರು ಅಗತ್ಯ ಔಷಧಿಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ.
ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ಬೇಸಿಗೆಯ ತಾಪದಿಂದ ಬಚಾವಾಗಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:
ಮಧ್ಯಾಹ್ನದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಅಗತ್ಯ ಕೆಲಸಗಳಿದ್ದರೆ ಬೆಳಗ್ಗೆ ಅಥವಾ ಸಂಜೆ ಪೂರೈಸಿಕೊಳ್ಳಿ. ಅನಿವಾರ್ಯವಾಗಿ ಹೊರಹೋಗಬೇಕಾದರೆ ಛತ್ರಿ ಬಳಸಿ.
ಒಂದೇ ಬಾರಿ ಅತಿಯಾಗಿ ತಿನ್ನುವ ಬದಲು, ಸ್ವಲ್ಪ ಸ್ವಲ್ಪವಾಗಿ ಹೆಚ್ಚು ಬಾರಿ ಆಹಾರ ಸೇವಿಸಿ.
ಉಡುಪು: ಹಗುರವಾದ, ಸಡಿಲವಾದ ಮತ್ತು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ.