newsics.com/ನ್ಯೂಸಿಕ್ಸ್
ನವದೆಹಲಿ: 2026 ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣಾ ಫಲಿತಾಂಶ ಬಂದಿದ್ದೇ ತಡ ದೀದಿ ಖ್ಯಾತಿಯ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಎಂಬ ಭದ್ರಕೋಟೆ ಚಿದ್ರವಾಗುವತ್ತ ಸಾಗುತ್ತಿದೆ.
ಈಗಾಗಲೇ 59 ವಿಧಾನಸಭಾ ಶಾಸಕರು ಹಾಗೂ 20 ಸಂಸದರು ಮಮತಾ ವಿರೋಧಿ ಮತ್ತೊಂದು ಬಣವನ್ನು ರಚಿಸಿದ್ದಾರೆ. ಅದರಲ್ಲೂ, ಒಂದು ಹೆಜ್ಜೆ ಮುಂದೇ ಹೋಗಿರುವ ಟಿಎಂಸಿ ಸಂಸದರು ಎನ್ಡಿಎ ಮೈತ್ರಿಕೂಟವನ್ನೇ ಸೇರಲು ಮುಂದಾಗಿದ್ದಾರೆ. ಇದರ ನಡುವೆ, ಆ ಎಲ್ಲಾ ನಾಯಕರಿಗೂ ತಿರುಗೇಟು ನೀಡಲು ಮುಂದಾಗಿರುವ ಮಮತಾ ಅವರು ತಮ್ಮ ಪಕ್ಷವನ್ನು ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಲೀನಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಾವ ಪಾರ್ಟಿಯನ್ನು ಬಿಜೆಪಿಯಷ್ಟೇ ತನ್ನ ವಿರೋಧಿ ಎಂದು ಹೇಳಿಕೊಂಡು ಬರುತ್ತಿದ್ದ, ಮಮತಾ ಬ್ಯಾನರ್ಜಿ, ಸೋನಿಯಾ ಗಾಂಧಿಯವರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ಸೋಮವಾರ (ಜೂನ್ 9) ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆದಿತ್ತು. ಡಿಎಂಕೆ, ಆಮ್ ಆದ್ಮಿ ಪಾರ್ಟಿಯ ಬಹಿಷ್ಕಾರದ ಮಧ್ಯೆಯೂ ನಡೆದ ಸಭೆಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ/ ಸಂಸದರೂ ಆಗಿರುವ ಅಭಿಷೇಕ್ ಬ್ಯಾನರ್ಜಿ ಭಾಗವಹಿಸಿದ್ದರು. ಸೋನಿಯಾ ಗಾಂಧಿ ಜೊತೆ ಅತ್ಯಂತ ಆತ್ಮೀಯದಿಂದ ಕಂಡ ಮಮತಾ, ಅವರನ್ನು ಸೋಲಿನ ವಿಚಾರದಲ್ಲಿ ಸಾಂತ್ವನವನ್ನು ಸೋನಿಯಾ ಹೇಳಿದರು ಎಂದು ಸುದ್ದಿಯಾಗುತ್ತಿದೆ. ಪಕ್ಷದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಮಮತಾ, ಸೋನಿಯಾ ಅವರಲ್ಲಿ ತಮ್ಮ ದುಃಖವನ್ನು ತೋಡಿಕೊಂಡರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಕ್ಷವನ್ನು ಕಟ್ಟಿ ಬೆಳೆಸಿ, ಸತತ ಮೂರು ಅವಧಿಗೆ ಅಧಿಕಾರಕ್ಕೇರಿದ್ದ ಮಮತಾ ಬ್ಯಾನರ್ಜಿ ಮತ್ತು ಅವರ ಅಳಿಯನನ್ನೇ ಭಿನ್ನಮತೀಯರು ಎಂದು ಬಹುಪಾಲು ಟಿಎಂಸಿ ನಾಯಕರು ಹೇಳುತ್ತಿರುವುದು, ಮಮತಾ ಹಿನ್ನಡೆಗೆ ಆಗುತ್ತಿರುವ ಒಂದು ಉದಾಹರಣೆಯಾಗಿದೆ. ಎರಡು ದಿನಗಳಲ್ಲಿ ಮತ್ತಿಬ್ಬರು ರಾಜ್ಯಸಭಾ ಸದಸ್ಯರು, ಟಿಎಂಸಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇವರ ರಾಜೀನಾಮೆ ಆಂಗೀಕಾರವೂ ಆಗಿದೆ.
ಇಪ್ಪತ್ತಕ್ಕೂ ಹೆಚ್ಚು ಸಂಸದರು, ಬಿಜೆಪಿ ಮೈತ್ರಿಕೂಟದ ಜೊತೆ ಗುರುತಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಂತಹ ಸಮಯದಲ್ಲಿ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿಗೆ ಆಸರೆಯಾಗುತ್ತಾರಾ ಎನ್ನುವುದು ಪ್ರಶ್ನೆಯಾಗಿದೆ.
ವಿಲೀನ ಪ್ರಕ್ರಿಯೆ ನಡೆದರೆ ಸಂಭಾವ್ಯ ಸಾಂಸ್ಥಿಕ ಬದಲಾವಣೆಯ ಬಗ್ಗೆ ರೂಪುರೇಷೆಯನ್ನೂ ಕಾಂಗ್ರೆಸ್ ಸಿದ್ದಪಡಿಸಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಗೆ ಕಾಂಗ್ರೆಸ್ ಮತ್ತು ಟಿಎಂಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಭಿಷೇಕ್ ಬ್ಯಾನರ್ಜಿ ಪಾತ್ರದ ಬಗ್ಗೆ ಮುಕ್ಕಾಲು ಭಾಗ, ಟಿಎಂಸಿ ನಾಯಕರಿಗೆ ಅಸಮಾಧಾನ ಇರುವ ಹಿನ್ನಲೆಯಲ್ಲಿ, ಕಾಂಗ್ರೆಸ್ ಜೊತೆ ವಿಲೀನಕ್ಕೆ ಬಹಳಷ್ಟು ಜನ ಒಪ್ಪುತ್ತಿಲ್ಲ. ಇಂತಹ ಯಾವುದೇ ಪ್ರಪೋಸಲ್ ಇಲ್ಲ ಎಂದು ಟಿಎಂಸಿ ನಾಯಕರೊಬ್ಬರು ಹೇಳಿಕೆಯನ್ನು ನೀಡಿದ್ದಾರೆ.