Subscribe ನ್ಯೂಸಿಕ್ಸ್ ಕನ್ನಡ
newsics.com
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಕುರಿತ ವದಂತಿಗಳು ಮತ್ತೆ ಬಿರುಸುಗೊಂಡಿವೆ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಈ ಜೋಡಿ ಶೀಘ್ರದಲ್ಲೇ ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.
ಆದರೆ ಇದೀಗ ರಶ್ಮಿಕಾ ಅವರ ಮದುವೆ ದಿನಾಂಕವನ್ನು ಬದಲಾವಣೆ ಮಾಡಿರುವ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ.
ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ರಶ್ಮಿಕಾ-ವಿಜಯ್ ಅವರ ಮದುವೆ ಫೆಬ್ರವರಿ 26ರಂದು ನಡೆಯಲಿದೆ ಎಂಬ ಸುದ್ದಿ ಹರಡಿತ್ತು. ಆದರೆ ಇದೀಗ ಮಿಡ್-ಡೆ ವರದಿ ಪ್ರಕಾರ ಮದುವೆ ದಿನಾಂಕವನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ. ಹೊಸ ಮಾಹಿತಿಯಂತೆ, ಫೆಬ್ರವರಿ 5ರಂದು ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ, ಕುಟುಂಬದ ಜ್ಯೋತಿಷ್ಯರ ಸಲಹೆಯಂತೆ ಫೆಬ್ರವರಿ 26ನ್ನು ತಪ್ಪಿಸಿ, ಫೆಬ್ರವರಿ 5ರಂದು ಶುಭ ದಿನಾಂಕ ಆಯ್ಕೆ ಮಾಡಲಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ವರದಿಗಳ ಪ್ರಕಾರ, ಫೆಬ್ರವರಿ 2ರಿಂದಲೇ ರಶ್ಮಿಕಾ ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಆರಂಭವಾಗಲಿವೆ. ಮೊದಲಿಗೆ ಸಂಗೀತ್, ಹಳದಿ ಹಾಗೂ ಮೆಹಂದಿ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮಗಳ ಬಳಿಕ ಮದುವೆ ನೆರವೇರಲಿದ್ದು, ನಂತರ ಆರತಕ್ಷತೆ ಕೂಡ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಅತ್ಯಂತ ಖಾಸಗಿ ಕಾರ್ಯಕ್ರಮವಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗುತ್ತದೆ. ಮದುವೆ ತೀರಾ ಅದ್ಧೂರಿಯಾಗಿರುವುದಿಲ್ಲ ಎಂದು ನಟನ ಆಪ್ತರು ಹೇಳಿರುವುದಾಗಿ ವರದಿಯಾಗಿದೆ. ಮತ್ತೊಂದು ಅಚ್ಚರಿ ವಿಚಾರವೆಂದರೆ ಮದುವೆಗೆ ಬೇಕಾದ ಹೂವಿನ ಅಲಂಕಾರಕ್ಕಾಗಿ ಬೆಂಗಳೂರಿನಿಂದಲೇ ದೊಡ್ಡ ಪ್ರಮಾಣದಲ್ಲಿ ಹೂಗಳನ್ನು ರಾಜಸ್ಥಾನಕ್ಕೆ ಕಳುಹಿಸಲಾಗುತ್ತಿದೆ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ.