https://youtube.com/shorts/yWrDals90_k?si=qTyTxtvMLgrsr7gN
Subscribe ನ್ಯೂಸಿಕ್ಸ್ ಕನ್ನಡ
newsics.com
ಪ್ರೀತಿ ವೈಫಲ್ಯದ ಸೇಡನ್ನು ತೀರಿಸಿಕೊಳ್ಳಲು ಮಹಿಳೆಯೊಬ್ಬಳು ಸಿನಿಮೀಯ ಮಾದರಿಯಲ್ಲಿ ಸಂಚು ರೂಪಿಸಿ, ತನ್ನ ಮಾಜಿ ಪ್ರೇಮಿಯ ಪತ್ನಿಗೆ ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಷನ್ ಮೂಲಕ ನೀಡಿದ ಘಟನೆ ಕರ್ನೂಲ್‌ನಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನೂಲ್ ಪೊಲೀಸರು ರವಿವಾರ ಪ್ರಮುಖ ಆರೋಪಿ ವಸುಂಧರಾ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಿ. ಬೋಯ ವಸುಂಧರಾ (34), ಖಾಸಗಿ ಆಸ್ಪತ್ರೆಯ ನರ್ಸ್ ಕೊಂಗೆ ಜ್ಯೋತಿ (40) ಹಾಗೂ ಆಕೆಯ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ
ವಸುಂಧರಾ ತನ್ನ ಮಾಜಿ ಪ್ರೇಮಿಯು ಮತ್ತೊರ್ವ ಮಹಿಳೆಯನ್ನು ಮದುವೆಯಾಗಿದ್ದನ್ನು ಸಹಿಸಲಾರದೆ, ಆ ದಂಪತಿಯನ್ನು ಬೇರ್ಪಡಿಸಲು ಈ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಸುಂಧರಾ ತನ್ನ ಸ್ನೇಹಿತೆಯಾದ ನರ್ಸ್ ಜ್ಯೋತಿ ಸಹಾಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಚ್‌ಐವಿ ರೋಗಿಗಳ ರಕ್ತದ ಮಾದರಿಗಳನ್ನು ‘ಸಂಶೋಧನೆ’ ಎಂದು ಸುಳ್ಳು ಹೇಳಿ ಪಡೆದುಕೊಂಡಿದ್ದಳು. ಈ ರಕ್ತವನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟಿದ್ದಳು. ಜ.9 ರಂದು ಕರ್ನೂಲ್‌ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಸಂತ್ರಸ್ತೆ (ಮಾಜಿ ಪ್ರೇಮಿಯ ಪತ್ನಿ) ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಆರೋಪಿಗಳು ಬೈಕ್‌ನಿಂದ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತವಾಗಿ ಕೆಳಗೆ ಬಿದ್ದ ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಬಂದ ವಸುಂಧರಾ, ಅವರನ್ನು ಆಟೋರಿಕ್ಷಾಕ್ಕೆ ಹತ್ತಿಸುವ ನಾಟಕವಾಡಿ ಅವರ ದೇಹಕ್ಕೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ್ದಾಳೆ.
ಸಂತ್ರಸ್ತೆ ಕಿರುಚಿಕೊಂಡಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆಯ ಪತಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಂತ್ರಸ್ತೆ ಸ್ವತಃ ವೈದ್ಯೆಯಾಗಿರುವುದರಿಂದ ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪೊಲೀಸರ ಪ್ರಕಾರ, ಎಚ್‌ಐವಿ ವೈರಸ್ ಮಾನವ ದೇಹದ ಹೊರಗೆ ಅಥವಾ ಫ್ರಿಡ್ಜ್‌ನಲ್ಲಿ ದೀರ್ಘಕಾಲ ಇಡಲು ಸಾಧ್ಯವಿಲ್ಲ. ಹೀಗಾಗಿ ಸೋಂಕು ಹರಡುವ ಸಾಧ್ಯತೆ ಕಡಿಮೆ ಎನ್ನಲಾಗಿದ್ದರೂ, ಮುನ್ನೆಚ್ಚರಿಕೆ ವಹಿಸಲಾಗಿದೆ. ಸದ್ಯ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.