newsics.com
ನಿರೀಕ್ಷಿತ ಸಾಧನೆ ಮಾಡಲಾಗುತ್ತಿಲ್ಲ ಎಂದು ನೊಂದ 19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಆತ್ಮ*ಹತ್ಯೆಗೆ ಮುಂದಾಗಿದ್ದು, ಶಿಕ್ಷಕರು ಆಕೆಯನ್ನು ರಕ್ಷಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಈ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ತಾನು ಕೋಚಿಂಗ್ ಪಡೆಯುತ್ತಿದ್ದ ಮೂರು ಅಂತಸ್ತಿನ ಕೋಚಿಂಗ್ ಸಂಸ್ಥೆಯ ಟೆರೇಸ್ನಿಂದ ಜಿಗಿಯಲು ಪ್ರಯತ್ನಿಸಿ ದ್ದಾಳೆ.
ಆಕೆಯನ್ನು ಶಿಕ್ಷಕರು ರಕ್ಷಿಸಿದ್ದು, ಈ ಕುರಿತ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಕೆಯನ್ನು ರಕ್ಷಿಸಿದ್ದ ಶಿಕ್ಷಕರ ಈ ಕಾರ್ಯವು ನೆಟ್ಟಿಗರ ಗಮನ ಸೆಳೆದಿದೆ.
ಜೈಪುರದ ಚುರುವಿನ 19 ವರ್ಷದ ವಿದ್ಯಾರ್ಥಿನಿ ಗೋಪಾಲಪುರದ ಗುರು ಕೃಪಾ ಕೋಚಿಂಗ್ನಲ್ಲಿ ನೀಟ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಳು. ನೀಟ್ ಆಕಾಂಕ್ಷಿಯಾಗಿದ್ದ ಆಕೆಯು ತನ್ನ ಕನಸು ಈಡೇರಲಿಲ್ಲ ಎಂಬ ಕಾರಣಕ್ಕೆ ಕೋಚಿಂಗ್ ಸಂಸ್ಥೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಬಳಿಕ ಶಿಕ್ಷಕರು ಆಕೆಯನ್ನು ರಕ್ಷಿಸಿದ್ದಾರೆ.
ಆಗಸ್ಟ್ 29ರಂದು ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿನಿಯು ಮನನೊಂದು ಟೆರೇಸ್ ಗೋಡೆಯನ್ನು ಹತ್ತಿ ಅಲ್ಲಿಂದ ಜಿಗಿಯಲು ಪ್ರಯತ್ನಿಸಿದ್ದಾಳೆ. ಶಿಕ್ಷಕರು ಮತ್ತು ಇತರರು ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಕಟ್ಟಡದ ಕೆಳಗೆ ಸುಮಾರು ಜನರು ನಿಂತಿದ್ದ ಕಾರಣ ಆಕೆ ಕೆಳಗೆ ನೋಡುತ್ತಿದ್ದ ವೇಳೆ ಶಿಕ್ಷಕರೊಬ್ಬರು ಅವಳನ್ನು ಹಿಂದಿನಿಂದ ಹಿಡಿದು ಎಳೆಯುವ ಮೂಲಕ ಆಕೆಯನ್ನು ರಕ್ಷಿಸಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಈ ಕುರಿತು ಮಹೇಶ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಕೋಚಿಂಗ್ ಪರೀಕ್ಷೆಗಳಲ್ಲಿ ಸತತವಾಗಿ ಫೇಲ್ ಆಗಿದ್ದಳು. ಆ. 29ರಂದು ಆಕೆಯ ಮನೆಯವರು ಸಂಸ್ಥೆಗೆ ಭೇಟಿ ನೀಡಿದ್ದು ಆಕೆ ಬಗ್ಗೆ ಕೋಚಿಂಗ್ ಸೆಂಟರ್ನಲ್ಲಿ ವಿಚಾರಿಸಿದ್ದಾರೆ. ಅವಳು ಪರೀಕ್ಷೆಯಲ್ಲಿ ಫೇಲ್ ಆದ ವಿಚಾರಕ್ಕೂ ಅಲ್ಲಿ ಮಾತುಕತೆ ನಡೆದಿದ್ದು, ಇದರಿಂದಾಗಿ ವಿದ್ಯಾರ್ಥಿನಿ ಮಾನಸಿಕ ಒತ್ತಡವನ್ನು ಅನುಭವಿಸಿದ್ದಾಳೆ. ತನ್ನಿಂದ ಈ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.