newsics.com/ನ್ಯೂಸಿಕ್ಸ್
ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು, ಅವರ ಹೊಸ ಮಂತ್ರಿಮಂಡಲದಲ್ಲಿ ಓರ್ವ ಮಹಿಳೆಗೂ ಸ್ಥಾನ ಸಿಕ್ಕಿಲ್ಲ.
ಹೈಕಮಾಂಡ್ ಜತೆ ಸುದೀರ್ಘವಾಗಿ ಚರ್ಚೆ ನಡೆಸಿ ಅಳೆದು ತೂಗಿ ಅಂತಿಮಗೊಳಿಸಲಾಗಿದ್ದರೂ ಮಹಿಳೆಗೆ ಸ್ಥಾನ ಸಿಗದಿರುವುದು ಈಗ ಚರ್ಚೆಯ ವಿಷಯವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಒಟ್ಟು 8 ಜನ (ಐವರು ವಿಧಾನಸಭೆ ಸದಸ್ಯರು, ಮೂವರು ವಿಧಾನ ಪರಿಷತ್ ಸದಸ್ಯರು) ಮಹಿಳಾ ಶಾಸಕರಿದ್ದರೂ ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ ಯಾವ ಮಹಿಳಾ ಶಾಸಕರಿಗೂ ಅವಕಾಶ ಸಿಕ್ಕಿಲ್ಲ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿದ್ದರೂ ಹಾಗೆ ಆಗಿಲ್ಲ.
ಸದ್ಯದಲ್ಲಿಯೇ ನಡೆಯುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಹಿಳೆಗೆ ಮಂತ್ರಿಯಾಗುವ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಮಹಿಳೆಯರ ಕೋಟಾದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಹಿರಿಯ ಮುಖಂಡರಾಗಿರುವ ಕೆ.ಹೆಚ್.ಮುನಿಯಪ್ಪನವರ ಪುತ್ರಿ ರೂಪಕಲಾ ಶಶಿಧರ್, ಹಿರಿಯ ನಾಯಕಿ ಮೋಟಮ್ಮನವರ ಪುತ್ರಿ ನಯನಾ ಮೋಟಮ್ಮ ಮತ್ತು ಕನೀಜ್ ಫಾತೀಮಾ ಇದ್ದಾರೆ. ಇದಲ್ಲದೆ ವಿಧಾನ ಪರಿಷತ್ ಸದಸ್ಯೆಯಾಗಿ ಚಿತ್ರನಟಿ ಉಮಾಶ್ರೀ, ಡಾ.ಆರತಿ ಕೃಷ್ಣ, ಬಲ್ಕೀಸ್ ಬಾನು, ಪಕ್ಷೇತರ ಶಾಸಕಿಯಾಗಿ ಗೆದ್ದು ನಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಪುತ್ರಿ ಲತಾ ಮಲ್ಲಿಕಾರ್ಜುನ್ ಸಹ ಇದ್ದಾರೆ.
ಸಚಿವರಾಗಲು ಮುನಿಯಪ್ಪನವರ ಪುತ್ರಿಯಾದ ರೂಪಕಲಾ ಶಶಿಧರ್ ಅವರು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಅಂತಿಮವಾಗಿ ಕೆ.ಹೆಚ್.ಮುನಿಯಪ್ಪನವರಿಗೇ ಮತ್ತೆ ಸಚಿವರಾಗುವ ಅವಕಾಶ ಸಿಕ್ಕಿದ್ದರಿಂದ ರೂಪಕಲಾ ಅವರಿಗೆ ಮಂತ್ರಿ ಭಾಗ್ಯ ದೊರೆಯುವುದು ಕಷ್ಟವಾಗಿದೆ. ನಯನ ಮೋಟಮ್ಮ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ ಮೊದಲ ಬಾರಿಯ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದಿಲ್ಲ ಎನ್ನುವ ಪಕ್ಷದ ನಿಯಮ ನಯನಾ ಮೋಟಮ್ಮನವರಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೆ ತರಲಾದ ಗ್ಯಾರಂಟಿ ಯೋಜನೆಗಳು ಹೆಚ್ಚಾಗಿ ಮಹಿಳಾ ಕೇಂದ್ರಿತ ಯೋಜನೆಗಳೆ ಆಗಿವೆ. ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ”ಗೃಹಲಕ್ಷ್ಮಿ” ಗ್ಯಾರಂಟಿ ಯೋಜನೆ ಮತ್ತು ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ”ಶಕ್ತಿ” ಗ್ಯಾರಂಟಿ ಯೋಜನೆ ಮಹಿಳೆಯರಿಗಾಗಿಯೇ ಜಾರಿಗೆ ತಂದಿರುವ ಕಾರ್ಯಕ್ರಮಗಲಾಗಿವೆ. ಆದರೆ ಡಿಕೆಶಿ ನೇತೃತ್ವದ 13 ಜನ ಸಚಿವರ ಹೊಸ ಮಂತ್ರಿಮಂಡಲದಲ್ಲಿ 8 ಜನ ಶಾಸಕರಿರುವರಲ್ಲಿ ಯಾವ ಮಹಿಳಾ ಶಾಸಕರಿಗೂ ಮಂತ್ರಿಯಾಗುವ ಸೌಭಾಗ್ಯ ದೊರೆಯದಿರುವುದು ವಿಪರ್ಯಾಸ.
ನೂತನ ಸಚಿವರಿಗೆ ವೇದಿಕೆ ಮೇಲೆಯೇ ಖಡಕ್ ಕ್ಲಾಸ್ ತೆಗೆದುಕೊಂಡ ರಾಜ್ಯಪಾಲರು