newsics.com
ನವದೆಹಲಿ: ಮತಗಳವು ಸಂಬಂಧ ಮಾಡಿದ ಆರೋಪವನ್ನು ಸಾಬೀತು ಮಾಡುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ರಾಹುಲ್ ಗಾಂಧಿ ಅವರು 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಕಲಿ ಮತದಾನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ವಿಡಿಯೋ ಮೂಲಕ ಮತಗಳ್ಳತನ ನಡೆದಿದೆ ಎಂದು ತೋರಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ತಮ್ಮ ಆರೋಪಗಳ ಬಗ್ಗೆ ಮತ್ತೊಮ್ಮೆ ಹೇಳಿಕೆ ನೀಡಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜತೆ ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ್ದರು.
ದೆಹಲಿಯಲ್ಲಿ ಪ್ರೆಸ್ ಮೀಟ್‌ನಲ್ಲಿ ಮಾಡಿದ ಆರೋಪದ ಬಗ್ಗೆ ಸ್ಪಷ್ಟನೆ ನೀಡುವಂತೆ ಇದೀಗ ಕರ್ನಾಟಕ ಚುನಾವಣಾ ಆಯೋಗ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಿದೆ.
ಇತ್ತೀಚಿನ ಪತ್ರಿಕಾಗೋಷ್ಠಿಯೊಂದರಲ್ಲಿ, ಚುನಾವಣಾ ಆಯೋಗದ ದಾಖಲೆಗಳನ್ನು ಉಲ್ಲೇಖಿಸಿ, ಶಕುನ್ ರಾಣಿ ಎಂಬ ಮಹಿಳೆ ಚುನಾವಣೆಯಲ್ಲಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ, ಈ ದಾಖಲೆಗಳು ಚುನಾವಣಾ ಆಯೋಗದಿಂದ ಬಂದಿವೆ” ಎಂದು ಹೇಳಲಾಗಿದ್ದು, ಈ ಗುರುತಿನ ಚೀಟಿಯಲ್ಲಿ ಎರಡು ಬಾರಿ ಮತ ಚಲಾಯಿಸಲಾಗಿದೆ, ಇದನ್ನು ಮತಗಟ್ಟೆ ಅಧಿಕಾರಿಯಿಂದ ಗುರುತಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಶಕುನ್ ರಾಣಿ ಅವರು ತಾವು ಕೇವಲ ಒಮ್ಮೆ ಮಾತ್ರ ಮತ ಚಲಾಯಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಅವರು ಎರಡು ಬಾರಿ ಮತ ಚಲಾಯಿಸಿದ ಆರೋಪವನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗದ ಕಚೇರಿಯಿಂದ ನಡೆಸಲಾದ ಪ್ರಾಥಮಿಕ ತನಿಖೆಯಲ್ಲಿ, ಪತ್ರಿಕಾಗೋಷ್ಠಿಯಲ್ಲಿ ತೋರಿಸಲಾದ ಗುರುತಿನ ಚೀಟಿಯ ದಾಖಲೆಯು ಮತಗಟ್ಟೆ ಅಧಿಕಾರಿಯಿಂದ ನೀಡಲಾದ ದಾಖಲೆಯಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ, ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪವನ್ನು ಆಧರಿಸಿ, ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು ರಾಹುಲ್ ಗಾಂಧಿಯವರಿಗೆ ಸೂಚಿಸಿದೆ. ಈ ದಾಖಲೆಗಳ ಆಧಾರದ ಮೇಲೆ ವಿವರವಾದ ತನಿಖೆ ಕೈಗೊಳ್ಳಲಾಗುವುದು ಎಂದು ಆಯೋಗ ತಿಳಿಸಿದೆ.
ಆ ಬಳಿಕ ಈ ಆರೋಪಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಲು ಚುನಾವಣಾ ಆಯೋಗವು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಿದ್ದು, ತನಿಖೆಯ ಫಲಿತಾಂಶವನ್ನು ಶೀಘ್ರ ಬಹಿರಂಗಪಡಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ರಾಹುಲ್ ಆರೋಪಗಳೇನು?
ಚುನಾವಣೆಗಳು ಪೂರ್ವನಿಯೋಜಿತವಾಗಿವೆ ಎಂದು ಆರೋಪಿಸಿದ್ದರು. ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ, ಸುಮಾರು 1,00,250 ಮತಗಳ ಕಳ್ಳತನ ನಡೆದಿದೆ ಎಂದು ದೂಷಿಸಿದ್ದರು.
ಕಾಂಗ್ರೆಸ್ ಪಕ್ಷವು ತನ್ನ ಆಂತರಿಕ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 16 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೂ, ಕೇವಲ 9 ಸೀಟುಗಳನ್ನು ಗೆದ್ದಿತು ಎಂದು ಅವರು ಹೇಳಿದ್ದರು.
ಪಾಲಿನ ಲೆಕ್ಕ ಮಾತಾಡಿ ಮೋದಿ ಕುಟುಕಿದ ಸಿಎಂ, ಪ್ರಧಾನಿಯಿಂದ ಜನಸೇವೆ ಪಾಠ!