ಪ್ರೀತಿಸಿದವರ ನಡುವಿನ ಪರಸ್ಪರ ಒಪ್ಪಿತ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ ಮಾಜಿ ಪ್ರೇಯಸಿ ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅರ್ಜಿದಾರನ ವಿರುದ್ದದ ವಂಚನೆ, ಅತ್ಯಾಚಾರ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ದಾಖಲಾಗಿದ್ದ ದೂರು ಮತ್ತು ಅದಕ್ಕೆ ಸಂಬಂಧಿಸಿ ಸೆಷನ್ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಿದೆ. ಪ್ರೀತಿ ಕ್ಷೀಣಿಸಿದ ಕಾರಣಕ್ಕೆ ಒಪ್ಪಿತ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಹೇಳಿದೆ.
ಅರ್ಜಿದಾರ ಮತ್ತು ಪ್ರಕರಣದ ದೂರುದಾರೆ ಆರು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿದೆ. ನಂತರದ ದಿನಗಳಲ್ಲಿ ಇಬ್ಬರ ನಡುವೆ ಬಿರುಕು ಉಂಟಾಗಿ ಇಬ್ಬರು ದೂರವಾಗಿದ್ದಾರೆ. ಇದರಿಂದ ದೂರುದಾರೆ ಅರ್ಜಿದಾರನ ವಿರುದ್ಧ 2018ರಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದರು