newsics.com
ಚಿಕ್ಕಮಗಳೂರು: ಕಾಡಾನೆ ದಾಳಿಗೆ ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಬಲಿಯಾಗಿದ್ದು,ಮಲೆನಾಡಿನಲ್ಲಿ ಕಾಡಾನೆ ಹಾವಳಿ ಮಿತಿಮೀರಿರುವುದಕ್ಕೆ ಸಾಕ್ಷಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿರುವ ಘಟನೆ ನಡೆದಿದೆ.
65 ವರ್ಷದ ಸುಬ್ರಾಯಗೌಡ, ಕಾಡಾನೆ ದಾಳಿ ಬಲಿಯಾದ ಮೃತ ದುರ್ದೈವಿ. ಕಳೆದ ಗುರುವಾರ (ಜುಲೈ 24, 2025) 25 ವರ್ಷದ ಯುವತಿ ಕವಿತಾ ಆನೆ ದಾಳಿಗೆ ಬಲಿಯಾಗಿದ್ದಳು.
ಇಂದು ಮೂಡಿಗೆರೆ-ಬೇಲೂರು ಗಡಿಯಲ್ಲಿ 25 ಕಾಡಾನೆಗಳ ಗುಂಪು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭಯ ಮತ್ತು ಆತಂಕ ಮನೆಮಾಡಿದೆ.ಪ್ರಕರಣ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಬ್ರಾಯಗೌಡರ ಸಾವಿನ ಬಳಿಕ ಸ್ಥಳೀಯರು ಬಾಳೆಹೊನ್ನೂರು ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ‘ನಿಮ್ಮ ಪರಿಹಾರ ಬೇಡ, ಜೀವ ಉಳಿಸಿ’ ಎಂದು ಧಿಕ್ಕಾರ ಕೂಗಿದ್ದಾರೆ. ಅರಣ್ಯ ಇಲಾಖೆಯ ವಿರುದ್ಧ ಕೆಂಡಾಮಂಡಲರಾದ ಮಲೆನಾಡಿಗರು, ಕಾಡಾನೆಗಳನ್ನು ಕಾಡಿಗೆ ಓಡಿಸುವ ಅಥವಾ ಸ್ಥಳಾಂತರಿಸುವ ಕ್ರಮಕ್ಕೆ ಒತ್ತಾಯಿಸಿದ್ದಾರೆ.