newsics.com
ಉತ್ತರ ಪ್ರದೇಶದ ಸ್ವಯಂ ಘೋಷಿತ ಬಾಬಾ ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಕಳೆದ ಮೂರು ವರ್ಷಗಳಲ್ಲಿ ಹಿಂದೂ ಹುಡುಗಿಯರನ್ನು ಮತಾಂತರ ಮಾಡಲು 1,000 ಕ್ಕೂ ಹೆಚ್ಚು ಮುಸ್ಲಿಂ ಪುರುಷರಿಗೆ ಹಣ ಒದಗಿಸಿದ್ದಾನೆ ಎನ್ನಲಾಗಿದೆ.
ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ATS) ಛಂಗೂರ್ ಬಾಬಾ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಈ ಅವಧಿಯಲ್ಲಿ ಮುಸ್ಲಿಂ ದೇಶಗಳಿಂದ 500 ಕೋಟಿ ರೂ.ಗಳನ್ನು ಪಡೆದು ಬಡವರು, ವಿಧವೆಯರು ಮತ್ತು ದುರ್ಬಲ ಮಹಿಳೆಯರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ಮತಾಂತರ ಜಾಲವನ್ನು ನಡೆಸುತ್ತಿದ್ದ ಎನ್ನಲಾಗಿದೆ.
‘ಲವ್ ಜಿಹಾದ್’ ಮೂಲಕ ಹಿಂದೂ ಹುಡುಗಿಯರನ್ನು ಆಕರ್ಷಿಸುತ್ತಿದ್ದ ಮುಸ್ಲಿಂ ಪುರುಷರಿಗೆ ಹಣದ ನೆರವು ನೀಡುತ್ತಿದ್ದ ಎನ್ನಲಾಗಿದೆ. ಛಂಗೂರ್ ಬಾಬಾ ಜೊತೆಗೆ, ಅವನ ಸಹಚರ ನೀತು ಅಲಿಯಾಸ್ ನಸ್ರೀನ್ಳನ್ನು ಸಹ ಬಂಧಿಸಲಾಗಿದ್ದು, ಏಳು ದಿನಗಳ ಕಾಲ ಭಯೋತ್ಪಾದನಾ ನಿಗ್ರಹ ದಳಕ್ಕೆ ಒಪ್ಪಿಸಲಾಗಿದೆ. ಮೂಲಗಳ ಪ್ರಕಾರ, ವಿದೇಶದಿಂದ ಬರುವ ಹಣವನ್ನು ನೀತು ನಸ್ರೀನ್ ನಿರ್ವಹಿಸುತ್ತಿದ್ದಳು.
ಗುಪ್ತಚರ ದಳ (ಐಬಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ವಿದೇಶಿ ಹಣಕಾಸಿನ ಮಾರ್ಗಗಳನ್ನು ಮತ್ತು ಹೆಚ್ಚಿನ ಸಂಪರ್ಕಗಳನ್ನು ಪತ್ತೆಹಚ್ಚಲು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವೀನ್ ಅಲಿಯಾಸ್ ಜಮಾಲುದ್ದೀನ್ ಮತ್ತು ಛಂಗೂರ್ ಬಾಬಾನ ಮಗ ಮೆಹಬೂಬ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ಲಖನೌ ಜಿಲ್ಲಾ ಜೈಲಿನಲ್ಲಿದ್ದಾನೆ.
ಕಳೆದ ಮೂರು ವರ್ಷಗಳಲ್ಲಿ ಬಾಬಾ, ನೀತು, ನವೀನ್ ಮತ್ತು ಮೆಹಬೂಬ್ ಅವರ ಬ್ಯಾಂಕ್ ಖಾತೆಗಳಿಂದ ನಡೆದ ದೊಡ್ಡ ವಹಿವಾಟುಗಳನ್ನು ಎಟಿಎಸ್ ಪರಿಶೀಲಿಸುತ್ತಿದೆ. ಇದುವರೆಗೆ ನಡೆದ ಪ್ರಾಥಮಿಕ ತನಿಖೆಯಲ್ಲಿ ಛಂಗೂರ್ ಬಾಬಾ ತನ್ನ ಮಗನ ಬ್ಯಾಂಕ್ ಖಾತೆಯಿಂದ ಆಸ್ತಿ ಖರೀದಿಸಲು ಮತ್ತು ವಹಿವಾಟು ನಡೆಸಲು ಬಳಸಿಕೊಂಡಿದ್ದು, ಅವನಿಗೆ ಭೂಮಿಯನ್ನು ಮಾರಾಟ ಮಾಡಿದ ಜನರನ್ನು ತನಿಖಾ ಏಜೆನ್ಸಿಯ ನಿಗಾಕ್ಕೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಶಾರ್ಜಾ, ದುಬೈ ಮತ್ತು ಯುಎಇಯಲ್ಲಿರುವ ಛಂಗೂರ್ನ ಶಂಕಿತ ವಿದೇಶಿ ಬ್ಯಾಂಕ್ ಖಾತೆಗಳನ್ನು ಇನ್ನೂ ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.