newsics.com
ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ಸಿಬಿಎಸ್‌ಇ ಮಾದರಿಯಲ್ಲೇಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ.
ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿಬಿಎಸ್‌ಇ ಮಾದರಿಯಲ್ಲೇ ಪರೀಕ್ಷೆ ಎದುರಿಸಬೇಕು.
ಕೆಎಸ್ಇಎಬಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಈಗಿರುವ 35 ರಿಂದ 33 ಕ್ಕೆ ಇಳಿಸಲು ಮತ್ತು ಪ್ರಥಮ ಭಾಷೆಗೆ ಪರೀಕ್ಷೆ ನಡೆಸುವ ಒಟ್ಟು ಅಂಕಗಳನ್ನು 125 ರಿಂದ 100 ಕ್ಕೆ ಇಳಿಸಲು ಶಿಫಾರಸು ಮಾಡಿದೆ.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಫಲಿತಾಂಶ ಕುಸಿತ ಕಂಡ ನಂತರ, ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್, ರಾಜ್ಯ ಮಂಡಳಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ತಡೆಯಲು ಸಿಬಿಎಸ್‌ಇ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಮನವಿ ಸಲ್ಲಿಸಿತ್ತು.
ಸಿಬಿಎಸ್‌ಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಂತರಿಕ ಅಂಕಗಳೂ ಸೇರಿ ಒಟ್ಟಾರೆ ಶೇ 33 ಅಂಕ ಪಡೆದರೂ ತೇರ್ಗಡೆಯಾಗುತ್ತಾರೆ. ಪ್ರತಿ ವಿಷಯಕ್ಕೂ 20 ಆಂತರಿಕ ಅಂಕಗಳಿದ್ದು, 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗು ತ್ತದೆ. ಎರಡೂ ಸೇರಿ 100ಕ್ಕೆ ಕನಿಷ್ಠ 33 ಅಂಕ ಪಡೆದವರು ಉತ್ತೀರ್ಣರಾಗುತ್ತಾರೆ. ಇದೇ ಮಾದರಿಯನ್ನು ಎಸ್‌ಎಸ್‌ಎಲ್‌ಸಿಯಲ್ಲೂ ಅಳವಡಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿ ಪ್ರಥಮ ಭಾಷೆಯನ್ನು125ಕ್ಕೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಲಾಗುತ್ತದೆ. ಇದರಲ್ಲಿ ಪ್ರಥಮ ಭಾಷೆ 25 ಹಾಗೂ ಉಳಿದ ಇತರೆ ವಿಷಯಗಳಲ್ಲಿ ತಲಾ 20 ಅಂಕಗಳು ಆಂತರಿಕ ಮೌಲ್ಯಮಾಪನಕ್ಕೆ ನಿಗದಿ ಮಾಡಲಾಗಿದೆ. ಸಿಬಿಎಸ್‌ಇ ಮಾದರಿಯ ಹೊಸ ನಿಯಮ ಜಾರಿಯಾದರೆ ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ 20 ಆಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಬಂದರೂ ಸಾಕು ಆ ವಿಷಯದಲ್ಲಿ ತೇರ್ಗಡೆಯಾಗುತ್ತಾನೆ.
ಕನ್ನಡ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125ರ ಬದಲು 100ಕ್ಕೆ ಸೀಮಿತಗೊಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದೆ.
ನಿವೃತ್ತ ಪ್ರಾಧ್ಯಾಪಕ ಗಣೇಶ್ ಭಟ್ ಅಧ್ಯಕ್ಷತೆಯಲ್ಲಿ ರಚಿಸಲಾಗಿ ರುವ ಪರೀಕ್ಷೆ ಸುಧಾರಣಾ ಸಮಿತಿಯು, ಮುಂಬರುವ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಒಂದು ಅಂಕದ, ಬಹು ಆಯ್ಕೆಯ ಪ್ರಶ್ನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಲು, ಪ್ರತಿ ವಿಭಾಗದಲ್ಲೂ ಹೆಚ್ಚು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಎರಡು, ಮೂರು, ನಾಲ್ಕು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಉತ್ತರ ಬರೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲು ಸಮಿತಿ ಚರ್ಚೆ ನಡೆಸಿದೆ.