ನವದೆಹಲಿ: ಕಳೆದ ವರ್ಷದ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ನಡೆಯಲಿರುವ NEET-UG ಮರುಪರೀಕ್ಷೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ನಾಳೆ (ಜೂನ್ 21) ದೇಶದ 551 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಾಷ್ಟ್ರವ್ಯಾಪಿ ಮೆಗಾ ಮಾಕ್ಡ್ರಿಲ್ ನಡೆಸುತ್ತಿದೆ.
ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅಣುಕು ಕಾರ್ಯಾಚರಣೆ ನಡೆಯಲಿದ್ದು, ಪ್ರಶ್ನೆಪತ್ರಿಕೆಗಳ ಸಾಗಣೆ, ವಿತರಣೆ, ಉತ್ತರ ಪತ್ರಿಕೆಗಳ ಸಂಗ್ರಹ ಹಾಗೂ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಸೇರಿದಂತೆ ಪ್ರತಿಯೊಂದು ಹಂತವನ್ನು ಪರೀಕ್ಷಿಸಲಾಗುತ್ತಿದೆ.
ಈ ಬಾರಿ NEET-UG ಪರೀಕ್ಷೆಗೆ ಇದುವರೆಗಿನ ಅತ್ಯಂತ ಕಠಿಣ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ದೇಶಾದ್ಯಂತ ಸುಮಾರು 5,500 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಹಂತದ ಭದ್ರತೆ ಕಲ್ಪಿಸಲಾಗಿದ್ದು, ರಾಜ್ಯ ಪೊಲೀಸ್, ಜಿಲ್ಲಾಡಳಿತ ಹಾಗೂ ಕೇಂದ್ರ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆ ಮತ್ತು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಗೆ 15,000ಕ್ಕೂ ಹೆಚ್ಚು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಕ್ರಮ ಅಥವಾ ಸೋರಿಕೆ ಘಟನೆಗಳಿಗೆ ಅವಕಾಶ ನೀಡದಂತೆ ಎನ್ಟಿಎ ವಿಶೇಷ ನಿಗಾ ವಹಿಸಿದೆ.
ಹಿಂದಿನ ವಿವಾದಗಳಿಂದ ಪಾಠ ಕಲಿತಿರುವ ಅಧಿಕಾರಿಗಳು, ಈ ಬಾರಿ ಪಾರದರ್ಶಕ ಹಾಗೂ ದೋಷರಹಿತ ಪರೀಕ್ಷೆ ನಡೆಸಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.