newsics.com
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಯಾರಿಗೆ ಗೊತ್ತಿಲ್ಲ ಹೇಳಿ.ಬೆಂಗಳೂರು, ಮಾಯಾನಗರಿ.. ಲಕ್ಷಾಂತರ ಮಂದಿಗೆ ಬದುಕು ಕಟ್ಟಿಕೊಟ್ಟ ಜೀವನಾಡಿ.. ಇಂಥ ಮಾಯನಗರಿಗೆ ಟ್ರಾಫಿಕ್ ಅನ್ನೋ ಪೆಡಂಭೂತ ಕಾಡ್ತಿದೆ. ಇದೀಗ ಟ್ರಾಫಿಕ್ ಜಾಮ್ನಿಂದ ಬೇಸತ್ತಿರುವ ಬೆಂಗಳೂರಿನ ಜನರಿಗೆ ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಗುಡ್ ನ್ಯೂಸ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪಾಡ್ ಟ್ಯಾಕ್ಸಿ , ಹೈಪರ್ಲೂಪ್ ಸಾರಿಗೆ ವ್ಯವಸ್ಥೆ ಹಾಗೂ ಪಿಲ್ಲರ್ ಆಧಾರಿತ ಸಾಮೂಹ ಸಾರಿಗೆ ವ್ಯವಸ್ಥೆಯನ್ನು ಬೆಂಗಳೂರು ಮತ್ತು ದೆಹಲಿ ನಗರಗಳಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಜಾರಿಗೊಳಿಸುವ ಯೋಜನೆ ಇದೆ ಎಂದು ಗಡ್ಕರಿ ಹೇಳಿದ್ದಾರೆ.
ಎಲೆಕ್ಟ್ರಿಕ್ ತುರ್ತು ಸಾರಿಗೆ ಯೋಜನೆಗಳ ಕುರಿತು ವಿವರ ನೀಡಿದ ಅವರು, ಸದ್ಯ 135 ಸೀಟ್‌ನ ಎಲೆಕ್ಟ್ರಿಕ್ ಸಾರಿಗೆ ಬಸ್ ನಾಗ್ಪುರದಲ್ಲಿ ಪ್ರಾಯೋಗಿಕವಾಗಿ ಸಂಚರಿಸುತ್ತಿದೆ. ಈ ಪರೀಕ್ಷೆ ಪೂರ್ಣಗೊಂಡರೆ ಬೆಂಗಳೂರು- ಚೆನ್ನೈ, ದೆಹಲಿ-ಚಂಡೀಗಢ, ದೆಹಲಿ-ಡೆಹ್ರಾಡೂನ್, ದೆಹಲಿ-ಮೀರತ್, ದೆಹಲಿ-ಜೈಪುರ, ಮುಂಬೈ-ಪುಣೆ, ಮುಂಬೈ-ಔರಂಗಾಬಾದ್ ಮತ್ತು ಇತರೆ ನಗರಗಳ ನಡುವೆಯೂ ಪರಿಚಯಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಸಾರಿಗೆ ವ್ಯವಸ್ಥೆಯಲ್ಲಿ ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಮೂಹ ಸಾರಿಗೆ ವಿಚಾರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿದ್ದೇವೆ. ಅಮೆರಿಕದ ಗುಣಮಟ್ಟದ ರಸ್ತೆಯನ್ನು ದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವುದಾಗಿ ಗಡ್ಕರಿ ನುಡಿದರು.
ಪಾಡ್ ಟ್ಯಾಕ್ಸಿಗಳು ರಸ್ತೆಯ ಮೇಲೆ ಓಡಾಡಲ್ಲ. ಇವು ಆಗಸದಲ್ಲಿ ಕೇಬಲ್ ಮೂಲಕ ಚಲಿಸುವ ಟ್ಯಾಕ್ಸಿಗಳು. ಇವು ಸಣ್ಣ ಕಾರಿನ ರೀತಿಯಲ್ಲಿ ಇರುತ್ತವೆ. ಇವುಗಳಲ್ಲಿ ಒಂದರಲ್ಲಿ 4-6 ಜನರು ಕುಳಿತು ಪ್ರಯಾಣ ಮಾಡಬಹುದು. ಅಗಸದಲ್ಲಿ ಚಲಿಸುವುದರಿಂದ ಯಾವುದೇ ಟ್ರಾಫಿಕ್ ಜಾಮ್ ಇರಲ್ಲ. ಗಂಟೆಗೆ 60 ರಿಂದ 120 ಕಿಮೀ ವೇಗದಲ್ಲಿ ಪಾಡ್ ಟ್ಯಾಕ್ಸಿಗಳು ಅಗಸದಲ್ಲಿ ಸಂಚಾರ ಮಾಡುತ್ತವೆ. ಬೆಂಗಳೂರಿನ ಮೆಜೆಸ್ಟಿಕ್ ನಿಂದ ಬೆಂಗಳೂರಿನ ದೇವನಹಳ್ಳಿ ಏರ್ಪೋರ್ಟ್ ಅನ್ನು ಗಂಟೆಗೆ 130 ಕಿಮೀ ವೇಗದಲ್ಲಿ ಸಂಚರಿಸಿದರೆ 30 ನಿಮಿಷಕ್ಕೆ ತಲುಪಬಹುದು. ಹೀಗಾಗಿ ಟ್ರಾಫಿಕ್ ಜಾಮ್ನಿಂದ ಬೇಸತ್ತಿರುವ ಜನರಿಗೆ ಪಾಡ್ ಟ್ಯಾಕ್ಸಿಗಳು ರಿಲೀಫ್ ನೀಡಲಿವೆ.