newsics.com
ಗೋಲ್ಗಪ್ಪಕ್ಕಾಗಿ ಬಟಾಣಿಯನ್ನು ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಸೋನಾಭದ್ರದಲ್ಲಿ ನಡೆದಿದೆ.
ಒಂದೂವರೆ ವರ್ಷದ ಮಗು ಪ್ರಿಯಾ ಸಾವನ್ನಪ್ಪಿದ ಬಾಲಕಿ, ದುರಂತ ಎಂದರೆ ಪ್ರಿಯಾಳ ಸೋದರಿ ಸೌಮ್ಯ ಕೂಡ ಎರಡು ವರ್ಷಗಳ ಹಿಂದೆ ಇದೇ ರೀತಿಯ ದುರಂತದಲ್ಲಿ ಸಾವನ್ನಪ್ಪಿದ್ದಳು.
ಮಗು ಪ್ರಿಯಾಳ ತಂದೆ ಶೈಲೇಂದ್ರ ಅವರು ಗೋಲ್‌ಗಪ್ಪ ಮಾರಾಟಗಾರನಾಗಿದ್ದಾರೆ. ಝಾನ್ಸಿ ಮೂಲದ ಅವರು ಕಳೆದ ನಾಲ್ಕು ವರ್ಷದಿಂದ ದುದ್ಧಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಜೂನ್ 27 ರಂದು ಶೈಲೇಂದ್ರ ಅವರ ಪತ್ನಿ ಪೂಜಾ ಅವರು ಗೋಲ್ಗಪ್ಪಗಾಗಿ ಸ್ಟೌ ಮೇಲೆ ಬಟಾಣಿ ಬೇಯಲು ಇಟ್ಟಿದ್ದಾರೆ. ನಂತರ ಅವರು ಬೇರೇನೋ ಕೆಲಸ ಮಾಡುವುದಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಸಮಯದಲ್ಲಿ ಅಲ್ಲಿ ಆಟವಾಡುತ್ತಿದ್ದ ಪ್ರಿಯ ತಲೆಕೆಳಗಾಗಿ ಬಟಾಣಿ ಬೇಯುತ್ತಿದ್ದ ಪಾತ್ರೆಯೊಳಗೆ ಬಿದ್ದಿದ್ದಾಳೆ.
ಹೀಗೆ ಪಾತ್ರೆಗೆ ಬಿದ್ದ ಪ್ರಿಯಾಳ ಕಿರುಚಾಟ ಕೇಳಿ ತಾಯಿ ಪೂಜಾ ಓಡಿ ಬಂದಿದ್ದು, ಈ ವೇಳೆ ಮಗು ಬಹುತೇಕ ಬೆಂದು ಹೋಗಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಬಟ್ಟೆಯಲ್ಲಿ ಸುತ್ತಿ ಅವರು ಸಮೀಪದ ಆಸ್ಪತ್ರೆಗೆ ಎತ್ತಿಕೊಂಡು ಓಡಿದ್ದಾರೆ. ಆದರೆ ಅಲ್ಲಿನ ಮಗುವಿನ ಗಂಭೀರ ಸ್ಥಿತಿಯನ್ನು ನೋಡಿದ ವೈದ್ಯರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವಂತೆ ಹೇಳಿದ್ದಾರೆ. ಆದರೆ ತುರ್ತು ಚಿಕಿತ್ಸೆ ನೀಡಿದರು ಗಂಭೀರ ಗಾಯಗೊಂಡಿದ್ದ ಪ್ರಿಯಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.