newsics.com
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಬಂಧನ ಬೆನ್ನಲ್ಲೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೂ ಬಂಧನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ.
ನಾಗೇಂದ್ರ ಅವರನ್ನು ಶುಕ್ರವಾರ ಬಂಧಿಸಿರುವ ಇಡಿ, ಜುಲೈ 18ರವರೆಗೆ ತನ್ನ ವಶಕ್ಕೆ ಪಡೆದುಕೊಂಡಿದೆ.
ಇದರ ಬೆನ್ನಲ್ಲೇ ದದ್ದಲ್ ಅವರನ್ನೂ ಇಡಿ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ದದ್ದಲ್ ನಾಪತ್ತೆಯಾಗಿದ್ದಾರೆ. ಶುಕ್ರವಾರ ಎರಡನೇ ಬಾರಿಗೆ ಎಸ್‌ಐಟಿ ಮುಂದೆ ಹಾಜರಾಗಿದ್ದ ಬಸನಗೌಡ ದದ್ದಲ್, ವಿಚಾರಣೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದಾರೆ. ಸದ್ಯ ಯಲಹಂಕ ನಿವಾಸದಲ್ಲೂ ಇಲ್ಲ, ಅವರ ನಿವಾಸದಲ್ಲೂ ಇಲ್ಲ. ಇಡಿಯಿಂದ ಬಂಧನ ಸಾಧ್ಯತೆ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಬಸನಗೌಡ ದದ್ದಲ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಬಂಧನ ಕುಣಿಕೆ ಬಿಗಿಯಾಗುತ್ತಿದ್ದಂತೆ ನಾಪತ್ತೆಯಾಗಿರುವ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರಿಗೂ ಹುಡುಕಾಟ ನಡೆದಿದೆ. ಬ್ಯಾಂಕ್ ಅಧಿಕಾರಿಗಳಿಗಾಗಿ ಎಸ್ಐಟಿ ,ಇಡಿ, ಸಿಬಿಐ ಮೂರು ತನಿಖಾ ತಂಡಗಳಿಂದಲೂ ಶೋಧಕಾರ್ಯ ನಡೆದಿದೆ. ಈಗಾಗಲೇ ಬ್ಯಾಂಕ್‌ನ ಆರು ಮಂದಿ ಮೇಲೆ ಕೇಸ್ ದಾಖಲಾಗಿದೆ. ಆದರೆ ಕೇಸ್ ದಾಖಲಾಗ್ತಿದ್ದಂತೆ ಆರು ಮಂದಿ ಬ್ಯಾಂಕ್ ಅಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಕೋರ್ಟ್‌ಗೆ ಎಸ್‌ಐಟಿಯಿಂದ ರಿಮ್ಯಾಂಡ್ ಅರ್ಜಿ ಮೂಲಕ ಮಾಹಿತಿ ನೀಡಲಾಗಿದೆ.