newsics.com
ಶ್ರೀರಂಗಪಟ್ಟಣ (ಮಂಡ್ಯ): ಕೆಆರ್‌ಎಸ್ ಜಲಾಶಯಕ್ಕೆ 55ರಿಂದ 80 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆ ಹಿತದೃಷ್ಟಿಯಿಂದ 55 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಮತ್ತಷ್ಟು ನೀರು ಹೊರಬಿಡುವ ಸಾಧ್ಯತೆ ಇದೆ.
ಈಗಾಗಲೇ ಕಾವೇರಿ ಕೊಳ್ಳದ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿ ಕೆಆರ್‌ಎಸ್ ಜಲಾಶಯಕ್ಕೆ ಗುರುವಾರ ಬೆಳಗ್ಗೆ 8 ಗಂಟೆಗೆ 33 ಸಾವಿರ ಕ್ಯಸೆಕ್ ಒಳಹರಿವು ಬರುತ್ತಿತ್ತು. ನಂತರ ಬೆಳಗ್ಗೆ 11 ಗಂಟೆ ವೇಳೆಗೆ 45 ಸಾವಿರ ಕ್ಯಸೆಕ್‌ಗೆ ಏರಿಕೆ ಕಂಡುಬಂದಿತ್ತು. ಅಣೆಕಟ್ಟೆ ಭದ್ರತಾ ದೃಷ್ಟಿಯಿಂದ ಸಂಜೆ 4ರ ಹೊತ್ತಿಗೆ ಅಣೆಕಟ್ಟೆಯಿಂದ 55 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಯಿತು.
ಈಗಾಗಲೆ ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಭರ್ತಿಯಾಗಿ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಸುಮಾರು 80 ಸಾವಿರ ಕ್ಯುಸೆಕ್ ನೀರು ಹರಿದುಬರುವ ನಿರೀಕ್ಷೆಯಲ್ಲಿ ನೀರಾವರಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟೆ ಸುರಕ್ಷತೆಯಿಂದ ಹೆಚ್ಚಿನ ನೀರನ್ನು ಹೊರಬಿಡಲು ನಿರ್ಧರಿಸಿದ್ದಾರೆ. ಅಲ್ಲದೆ, ಗಂಟೆಗೊಮ್ಮೆ ಜಲಾಶಯದ ಒಳ ಹರಿವಿನ ಪ್ರಮಾಣವನ್ನು ಪರೀಕ್ಷಿಸಲಿದ್ದಾರೆ.