newsics.com
ಬೆಂಗಳೂರು: ನಿಮ್ಮ ಎಲ್ಪಿಜಿ ಗ್ಯಾಸ್ ಸಂಪರ್ಕಕ್ಕೆ ಇಕೆವೈಸಿ ಅಪ್ಡೇಟ್ ಮಾಡಬೇಕಾಗುತ್ತದೆ. ಐಒಸಿ ಸೇರಿದಂತೆ ಎಲ್ಲಾ ಸರ್ಕಾರಿ ಸ್ವಾಮ್ಯದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಗ್ರಾಹಕರಿಂದ ಆಧಾರ್ ಆಧಾರಿತ ಇಕೆವೈಸಿ ಪಡೆಯುತ್ತಿವೆ.
ಅಡುಗೆ ಅನಿಲ ಸಂಪರ್ಕವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಕಾರ್ಯ ಮಾಡಲಾಗುತ್ತಿದೆ. ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಮೊನ್ನೆ ಈ ವಿಚಾರದ ಬಗ್ಗೆ ಮಾತನಾಡಿ, ಆಧಾರ್ ಮೂಲಕ ಇಕೆವೈಸಿ ಅಪ್ಡೇಟ್ ಮಾಡಲು ಕಾರಣಗಳನ್ನು ನೀಡಿದ್ದಾರೆ.
ಗ್ಯಾಸ್ ಸಂಪರ್ಕಕ್ಕೆ ಇಕೆವೈಸಿ ಅಪ್ಡೇಟ್ ಮಾಡಲು ಸದ್ಯ ಸರ್ಕಾರ ಯಾವ ಡೆಡ್ಲೈನ್ ನೀಡಿಲ್ಲ. ಹೀಗಾಗಿ, ಆತುರ ಮಾಡದೇ ತಾಳ್ಮೆಯಿಂದ ಇಕೆವೈಸಿ ಮಾಡಲು ಸಾಕಷ್ಟು ಸಮಯಾವಕಾಶ ಇರುತ್ತದೆ.
ನಿಮ್ಮ ಗ್ಯಾಸ್ ವಿತರಕ ಏಜೆನ್ಸಿಯ ಕಚೇರಿಗೆ ಹೋಗಿ ಇಕೆವೈಸಿ ಮಾಡಬಹುದು. ನಿಮ್ಮ ಆಧಾರ್ ಪ್ರತಿಯನ್ನು ಅಲ್ಲಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ.
ಇಂಡಿಯನ್ ಆಯಿಲ್, ಭಾರತ್ ಗ್ಯಾಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಮೊಬೈಲ್ ಆ್ಯಪ್ಗಳಲ್ಲಿ ಇಕೆವೈಸಿ ಅಪ್ಡೇಟ್ ಮಾಡುವ ಅವಕಾಶ ಇರುತ್ತದೆ.
ಸಾಕಷ್ಟು ಜನರು ವಾಣಿಜ್ಯ ಉಪಯೋಗಕ್ಕೆ ಅಡುಗೆ ಅನಿಲವನ್ನೇ ಬಳಸುತ್ತಿದ್ದಾರೆ. ಹೋಟೆಲ್ ಇತ್ಯಾದಿಯವರು ಅಡುಗೆ ಅನಿಲ ಬಳಕೆದಾರರ ಹೆಸರಲ್ಲಿ ಸಿಲಿಂಡರ್ ಪಡೆದು ಬಳಸುವುದು ಇತ್ಯಾದಿ ನಡೆಯುತ್ತಿದೆ. ಇದನ್ನು ತಡೆಯಲು ಸರ್ಕಾರ ಗ್ರಾಹಕರಿಂದ ಆಧಾರ್ ಇಕೆವೈಸಿ ಮಾಡಿಸುವಂತೆ ಇಂಡೇನ್, ಎಚ್ಪಿ, ಬಿಪಿ ಗ್ಯಾಸ್ ವಿತರಕರಿಗೆ ತಿಳಿಸಿದೆ.