newsics.com
ಈಗ ಮದುವೆ ಸೀಸನ್ ನಡಿತಿದೆ. ಎಲ್ಲಿ ನೋಡಿದ್ರೂ ಮದುವೆ, ಮದುವೆ, ಮದುವೆಗಳದ್ದೇ ಸುದ್ದಿ. ಮದುವೆ ಅನ್ನೋದು ಜೀವನದ ಬಹುಮುಖ್ಯ ಘಟ್ಟ. ಕಲ್ಯಾಟ ಮಂಟಪ, ಪ್ಯಾಲೆಸ್‌ಗಳಂತಹ ದುಬಾರಿ ಸ್ಥಳದಲ್ಲಿ ಅದ್ದೂರಿ ವಿವಾಹಗಳು ಆಗುತ್ತಾರೆ. ಆದರೆ ಇಲ್ಲೊಂದು ಜೋಡಿಪ್ರಕೃತಿಯ ನಡುವೆ ಹಸೆಮಣೆ ಏರಿದೆ.
ಜಿಲ್ಲೆಯ ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ್ ಅವರು ಲಂಡನ್ನಲ್ಲಿ ಕಾನೂನು ಪದವಿ ಪಡೆದ ತಮ್ಮ ಪುತ್ರಿ ರಶ್ಮಿ ಅವರನ್ನು ಬೆಂಗಳೂರಿನ ವೀಣಾ ಮತ್ತು ಕಿಶೋರ್ ದಂಪತಿಯ ಪುತ್ರ, ಖಾಸಗಿ ಕಂಪನಿ ಉದ್ಯೋಗಿ ಕುಬೇರ್ ಅವರ ಜೊತೆ ತೋಟದಲ್ಲಿ ಮದುವೆ ಮಾಡಿಕೊಟ್ಟಿದ್ದು, ಪ್ರಕೃತಿ ಮಡಿಲಲ್ಲಿ ನವ ಜೀವನದ ಉಲ್ಲಾಸ ತರಿಸಿದ್ದಾರೆ.
ಲಂಡನ್‌ನ ಕಾನೂನು ವಿದ್ಯಾರ್ಥಿನಿ ಡಿ.ರಶ್ಮಿ, ಬೆಂಗಳೂರಿನ ಕೆ. ಕುಬೇರ್ ಜೋಡಿಯು, ಹಚ್ಚ ಹಸಿರಿನ ಪ್ರಕೃತಿಯ ನಡುವೆ, 300 ಆಪ್ತ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಇಂಟರ್‌ನೆಟ್‌ನಲ್ಲೂ ಈ ಮದುವೆ ಫೋಟೋಗಳು ವೈರಲ್ ಆಗಿವೆ. ಹಳ್ಳಿಯ ಸೊಗಡಿನಲ್ಲಿ ಅಲಂಕೃತವಾದ ಮಂಟಪ ಮತ್ತು ಪರಿಸರದ ಮಧ್ಯದ ಸಮಾರಂಭವು ಸಾಂಪ್ರದಾಯಿಕವಾಗಿ ಎಲ್ಲರ ಮನಸೂರೆಗೊಂಡಿದೆ.
ಹಲಸು ಮತ್ತು ಮಾವಿನ ಮರಗಳ ಕೆಳಗೆ ವಿವಾಹದ ಮಂಟಪ ರೆಡಿಯಾಗಿತ್ತು. ವಿಂಟೇಜ್ ಬೈಕ್‌ಗಳು, ಸ್ಕೂಟರ್‌ಗಳು, ಕಾರುಗಳು ಮತ್ತು ಕಂಚಿನ ಪಾತ್ರೆಗಳನ್ನು ಮದುವೆ ಮನೆಯಲ್ಲಿ ಅಲಂಕಾರವಾಗಿ ಬಳಸಲಾಗಿತ್ತು.
ತೋಟದಲ್ಲಿ ಬೆಳೆದಿರುವ ಬಾಳೆ, ಬಿದಿರು, ತೆಂಗು, ಚೆಂಡು, ಸೇವಂತಿಗೆ ಹೂಗಳಿಂದ ಚಪ್ಪರ ನಿರ್ಮಿಸಿದ್ದ ದಯಾನಂದ್, ತಾವೇ ಬೆಳೆದ ಮಾವು, ಕಲ್ಲಂಗಡಿ ಸೇರಿದಂತೆ ಹಲವು ಹಣ್ಣುಗಳ ಪಾನೀಯ ಕೊಟ್ಟಿದ್ದಾರೆ. ನವಣೆ ಬಾತ್, ಎಳನೀರು ಪಾಯಸ ಸೇರಿದಂತೆ ಸಿರಿ ಧಾನ್ಯಗಳ ಬೊಂಬಾಟ್ ಭೋಜನವನ್ನು ಮದುವೆ ಆಗಮಿಸಿದ ಅತಿಥಿಗಳಿಗೆ ಉಣ ಬಡಿಸಿದ್ದಾರೆ. ತಮ್ಮ ಜಮೀನಿನಲ್ಲಿ ಲೆಮನ್ ಗ್ರಾಸ್ ಬೆಳೆಯ ಮೂಲಕ ಆದಾಯವನ್ನು ಕಂಡುಕೊಂಡಿರುವ ದಯಾನಂದ್, ಬಂದ ಅತಿಥಿಗಳಿಗೆ ಲೆಮನ್ ಗ್ರಾಸ್ ಬೆಳೆಯುವ ವಿಧಾನ ಸೇರಿದಂತೆ ಹೈನುಗಾರಿಕೆ ಪಾಠ ಮಾಡಿದ್ದಲ್ಲದೇ ತಮ್ಮ ತೋಟದಲ್ಲೇ ಬೆಳೆದ ತೋತಾಪುರಿ ಮಾವಿನಕಾಯಿ ಹಾಗೂ ಲೆಮನ್ ಗ್ರಾಸ್ ಸಸಿಯನ್ನು ತಾಂಬೂಲವಾಗಿ ಕೊಟ್ಟು ಗಮನ ಸೆಳೆದಿದ್ದಾರೆ.
.