newsics.com
ನವದೆಹಲಿ: ಆಪರೇಷನ್ ಸಿಂಧೂರ’ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಮತ್ತು ಕೋಮುವಾದಿ ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ ಅವರ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ಆದೇಶಿಸಿದೆ.
ಕಳೆದ ವಾರ ಆಪರೇಷನ್ ಸಿಂಧೂರ ಕುರಿತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಸಚಿವ ವಿಜಯ್ ಶಾ ಪಾಕಿಸ್ತಾನದ ಉಗ್ರರು ನಮ್ಮ ಸಹೋದರಿಯರ ಕುಂಕುಮ ಅಳಿಸಿದರು. ಅದಕ್ಕೆ ತಿರುಗೇಟು ನೀಡಲು ಪ್ರಧಾನಿ ಮೋದಿ ಅವರದೇ ಸಮುದಾಯದ ಸಹೋದರಿಯನ್ನು ಮುಂದಿಟ್ಟುಕೊಂಡು ಉಗ್ರರನ್ನು ಮಟ್ಟಹಾಕಿದರು ಎಂಬ ಹೇಳಿಕೆ ನೀಡಿದ್ದರು. ಸೋಫಿಯಾ ಖುರೇಷಿಯನ್ನು ಉಗ್ರರ ಸಹೋದರಿ ಎಂದು ಕರೆದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ವಿಜಯ್ ಶಾ ಕ್ಷಮೆಯನ್ನು ಕೂಡ ಯಾಚಿಸಿದ್ದರು.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ನಾಳೆಯೊಳಗೆ ಮಧ್ಯಪ್ರದೇಶ ಕೇಡರ್‌ನ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಎಸ್‌ಐಟಿ ರಚಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಆದೇಶಿಸಿದೆ. ಆದಾಗ್ಯೂ, ಐಪಿಎಸ್ ಅಧಿಕಾರಿಗಳು ಮಧ್ಯಪ್ರದೇಶದ ಹೊರಗಿನವರಾಗಿರಬೇಕು ಎಂದು ಅದು ಹೇಳಿದೆ.