newsics.com
ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರೇಳಿಕೊಂಡು ಕೋಟ್ಯಂತರ ರು. ಮೌಲ್ಯದ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಆರೋಪಿ ಐಶ್ವರ್ಯಗೌಡ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ.
ನಂತರ ವಿಚಾರಣೆ ವೇಳೆ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಐಶ್ವರ್ಯ ಗೌಡ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಐಶ್ವರ್ಯಗೌಡಗೆ ಸೇರಿದ ಬೆಂಗಳೂರು ಮತ್ತು ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ನಿವಾಸ ಹಾಗೂ ವಿನಯ್ ಕುಲಕರ್ಣಿ ಅವರ ಬೆಂಗಳೂರು ನಿವಾಸದಲ್ಲಿ ಇ.ಡಿ. ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಪರಿಶೀಲನೆ ವೇಳೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ವಹಿವಾಟು ಸೇರಿ ಇತರೆ ಮಾಹಿತಿಗಳನ್ನು ಕಲೆಹಾಕಿದರು.
ರಾತ್ರಿವರೆಗೆ ಶೋಧ: ದಾಳಿ ವೇಳೆ ಇ.ಡಿ. ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದರು. ಬೆಳಗ್ಗೆಯಿಂದ ರಾತ್ರಿವರೆಗೆ ಶೋಧ ಕಾರ್ಯ ನಡೆಸಿ, ಸ್ಥಳದಲ್ಲಿದ್ದವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮಳವಳ್ಳಿಯಲ್ಲಿ ಐಶ್ವರ್ಯ ಗೌಡ ತಾಯಿ ಮತ್ತು ಸಹೋದರನನ್ನು ಕೆಲ ದಾಖಲೆಗಳ ಸಂಬಂಧ ವಿಚಾರಣೆ ನಡೆಸಿದರು ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಐಶ್ವರ್ಯ ಗೌಡ ಅವರನ್ನು ಇ.ಡಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆಕೆ ಸೂಕ್ತ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.