newsics.com
ಬೆಂಗಳೂರು: ಕೆಆರ್ ಪುರಂ ರೈಲ್ವೆ ಸ್ಟೇಷನ್ನಿಂದ ಅಣ್ಣನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಬಿಹಾರದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.
ಯುವತಿಯ ಅಣ್ಣನ ಮೇಲೂ ಹಲ್ಲೆ ನಡೆದಿದೆ. ಘಟನೆ ಸಂಬಂಧ ಮಹದೇವಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಯುವತಿ ಕೇರಳದ ಎರ್ನಾಕುಲಂನಿಂದ ಬೆಂಗಳೂರಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು. ಇದಕ್ಕೂ ಮುನ್ನ, ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ, ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಳು.
ಅಣ್ಣನ ಸೂಚನೆಯಂತೆ ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಳು. ಬಳಿಕ, ಊಟಕ್ಕಾಗಿ ಮಹದೇವಪುರ ಕಡೆಗೆ ತನ್ನ ಅಣ್ಣನೊಂದಿಗೆ ತೆರಳುತ್ತಿದ್ದಾಗ ಇಬ್ಬರು ಅಪರಿಚಿತರು ಬೈಕ್ ಅಡ್ಡಗಟ್ಟಿದ್ದಾರೆ. ಅಪರಿಚಿತರು ಯುವತಿಯ ಅಣ್ಣನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಅಪಹರಿಸಿದ್ದಾರೆ. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.
ಮಹದೇವಪುರ ಪೊಲೀಸರು ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಆಶಿಫ್ ಎಂಬಾತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
https://www.newsics.com/2025/04/03/harapanahalli-woman-returning-from-festival-gang-raped-on-bus/