newsics.com
ನಾಗ್ಪುರ: ಪ್ರಧಾನಿಯಾಗಿ 11ವರ್ಷ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಒಂದು ಬಾರಿ ಹೋಗಿದ್ದ ಮೋದಿ ಅದಾದ 13 ವರ್ಷ ಬಳಿಕ ಮತ್ತೆ ಭೇಟಿ ನೀಡುತ್ತಿದ್ದಾರೆ.
ಆರ್‌ಎಸ್‌ಎಸ್ ಶತಮಾನೋತ್ಸವ ಸಂದರ್ಭದಲ್ಲಿ ಯುಗಾದಿ ದಿನದಂದು ಭೇಟಿ ನೀಡುತ್ತಿರುವುದು ಮತ್ತೊಂದು ವಿಶೇಷ.
ಅಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು, ಆರ್‌ಎಸ್‌ಎಸ್‌ನ ಸಂಸ್ಥಾಪಕ ಕೇಶವ್ ಬಲಿರಾಂ ಹೆಡ್ಗೇವಾರ್ ಹಾಗೂ 2ನೇ ಸರಸಂಘ ಸಂಚಾಲಕ ಎಂ.ಎಸ್.ಗೋಲ್ವಾಲ್ಕರ್ ಸ್ಮಾರಕಗಳಿರುವ ಸ್ಮತಿ ಮಂದಿರಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಬಳಿಕ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಜೊತೆ ಮಾತುಕತೆ ನಡೆಯಲಿದೆ. ನಂತರ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು 1956ರಲ್ಲಿ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದ ಸ್ಥಳವಾದ ಧೀಕ್ಷಾಭೂಮಿಗೂ ಭೇಟಿ ನೀಡಲಿದ್ದಾರೆ.
ಮಾಧವ ಕಣ್ಣಿನ ಆಸ್ಪತ್ರೆ ಉದ್ಘಾಟನೆ:
ಇದೇ ಸಂದರ್ಭದಲ್ಲಿ ಮಾಧವ ನೇತ್ರಾಲಯ ಕಣ್ಣಿನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವಿಸ್ತೃತ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸುವ ನಿರೀಕ್ಷೆಯಿದೆ. ಈ ಕೇಂದ್ರದಲ್ಲಿ 250 ಹಾಸಿಗೆಗಳ ಆಸ್ಪತ್ರೆ, 14 ಹೊರರೋಗಿ ವಿಭಾಗಗಳು (ಒಪಿಡಿ) ಮತ್ತು ಆಧುನಿಕ ಸವಲತ್ತಿನ 14 ಆಪರೇಷನ್ ಥಿಯೇಟರ್‌ಗಳ ಒಳಗೊಂಡಿರಲಿದೆ.
ಇದಲ್ಲದೆ, ಪ್ರಧಾನಿ ಮೋದಿಯವರು ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್‌ನ ಯುದ್ಧ ಸಾಮಗ್ರಿ ಸೌಲಭ್ಯಕ್ಕೆ ಭೇಟಿ ನೀಡಲಿದ್ದಾರೆ, ಅಲ್ಲಿ ಮಾನವರಹಿತ ವೈಮಾನಿಕ ವಾಹನಗಳಿಗಾಗಿ ವಿನ್ಯಾಸಗೊಳಿಸುವ ಹೊಸದಾಗಿ ನಿರ್ಮಿಸಲಾದ 1,250 ಮೀಟರ್ ಉದ್ದ ಮತ್ತು 25 ಮೀಟರ್ ಅಗಲದ ವಾಯುನೆಲೆ, ಯುದ್ಧಸಾಮಗ್ರಿ ಮತ್ತು ಸಿಡಿತಲೆ ಪರೀಕ್ಷಾ ಸೌಲಭ್ಯವನ್ನೂ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ನಾಗ್ಪುರದ ಬಳಿಕ ಪ್ರಧಾನಿ ಛತ್ತೀಸ್‌ಗಢಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟಿಸಲಿದ್ದಾರೆ.
Karnataka: ಕರ್ನಾಟಕದಲ್ಲಿಇ-ಪ್ರಸಾದ ಸೇವೆ ಆರಂಭ: ಪ್ರಸಾದಕ್ಕೆ ಹೆಚ್ಚಿದ ಬೇಡಿಕೆ