newsics.com
ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್‌ಗೆ ರೀಲ್ಸ್ ಕಂಟಕ ಸದ್ಯಕ್ಕೆ ಅಂತ್ಯವಾಗುವಂತೆ ಕಾಣುತ್ತಿಲ್ಲ.
ನಿನ್ನೆ ತಡ ರಾತ್ರಿ ಇಬ್ಬರನ್ನೂ ಕೋರಮಂಗಲದಲ್ಲಿರುವ 24ನೇ ಎಸಿಜೆಎಂ ಜಡ್ಜ್ ನಿವಾಸಕ್ಕೆ ಪೊಲೀಸರು ಕರೆದುಕೊಂಡು ಹೋದರು. ಈ ವೇಳೆ ಇಬ್ಬರಿಗೂ ಒಂದು ದಿನ ನ್ಯಾಯಾಂಗ ಬಂಧನ ನೀಡಿ ನ್ಯಾಯಾಧೀಶರು ಆದೇಶಿಸಿದರು.
ರಾತ್ರಿ ನ್ಯಾಯಾಧೀಶರು ವಿನಯ್ ಹಾಗೂ ರಜತ್ಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ರಾತ್ರಿ ಇಡೀ ಇಬ್ಬರೂ ಜೈಲಿನಲ್ಲಿ ಕಳೆದಿದ್ದು, ಇವರಿಗೆ ಸಂಕಷ್ಟ ಹೆಚ್ಚುವ ಸೂಚನೆ ಸಿಕ್ಕಿದೆ.
ಇಂದು ಮತ್ತೆ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ಈ ವೇಳೆ ಒಂದು ವಾರ ಪೊಲೀಸ್ ಕಸ್ಟಡಿಗೆ ಕೊಡಿವಂತೆ ಪೊಲೀಸರು ಮನವಿ ಮಾಡಲಿದ್ದಾರೆ. ಇನ್ನೂ ವಿಚಾರಣೆ ಬಾಕಿ ಇದೆ. ಅಲ್ಲದೆ, ರೀಲ್ಸ್ ಮಾಡಲು ಬಳಕೆ ಮಾಡಿದ್ದ ಮಚ್ಚು ನಾಪತ್ತೆಯಾಗಿದೆ. ಹೀಗಾಗಿ, ಇದರ ಬಗ್ಗೆ ವಿಚಾರಣೆಯ ಅಗತ್ಯವಿದೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆದ ರಜತ್ ಹಾಗೂ ವಿನಯ್ ಇಂದು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಇವರ ಪರ ವಕೀಲರು ಇಬ್ಬರಿಗೂ ಜಾಮೀನು ಕೇಳಿ ಕೋರ್ಟ್ ನಲ್ಲಿ ಮನವಿ ಮಾಡಲಿದ್ದಾರೆ. ಕೋರ್ಟ್ ನಲ್ಲಿ ಇಬ್ಬರ ಭವಿಷ್ಯ ನಿರ್ಧಾರವಾಗಲಿದೆ.