newsics.com
ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆ(NET)ಯಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷೆಯನ್ನು ರದ್ದು ಮಾಡಿ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆಯನ್ನು ಜಾರಿಗೆ ತರಲು ಅಧಿಸೂಚನೆ ನೀಡಿದೆ. 2024ಕ್ಕೆ ಅನ್ವಯವಾಗುವಂತೆ ಈ ಕಾಯಿದೆಯನ್ನು ಜಾರಿ ಮಾಡಲಾಗಿದೆ.
ಇದು ದೇಶಾದ್ಯಂತ ನಡೆಯುವ ಸಾರ್ವಜನಿಕ ಪರೀಕ್ಷೆಗಳು ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ನಡೆಯುವ ಅನ್ಯಾಯ ಹಾಗೂ ಅಕ್ರಮವನ್ನು ತಡೆಗಟ್ಟುವ ಉದ್ದೇಶ ಹೊಂದಿದೆ.
2024 ಫೆಬ್ರವರಿಯಲ್ಲಿ ನಡೆದ ಸಂಸತ್ ಸಭೆಯಲ್ಲಿ ಈ ಕಾನೂನನ್ನು ಅಂಗೀಕರಿಸಲಾಗಿತ್ತು. ಈ ಮೂಲಕ ಸಾರ್ವಜನಿಕ ಪರೀಕ್ಷೆಗಳು ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ಮೋಸ, ಅಕ್ರಮ ನಡೆಸುವವರಿಗೆ ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ನೀಡುವ ಬಗ್ಗೆಯೂ ಈ ಕಾನೂನಿನಲ್ಲಿ ಒಳಗೊಂಡಿತ್ತು. ವಂಚಕ ಏಜೆಂಟ್ಗಳ ಜತೆಗೆ ಕೈಜೋಡಿಸಿರುವವರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡ ವಿಧಿಸಲಾಗುವುದು ಎಂದು ಈ ಕಾನೂನಿನಲ್ಲಿ ತಿಳಿಸಲಾಗಿತ್ತು.
ಪ್ರಶ್ನೆ ಪತ್ರಿಕೆಗಳು ಅಥವಾ ಉತ್ತರ ಕೀಗಳನ್ನು ಸೋರಿಕೆ ಮಾಡುವುದು. ಅನಧಿಕೃತ ಸಂವಹನದ ಮೂಲಕ ಅಭ್ಯರ್ಥಿಗಳಿಗೆ ಸಹಾಯ ಮಾಡುವುದು. ಕಂಪ್ಯೂಟರ್ ನೆಟ್ವರ್ಕ್ಗಳು ಅಥವಾ ಸಂಪನ್ಮೂಲಗಳನ್ನು ತಿದ್ದುವುದು. ನಕಲಿ ಪರೀಕ್ಷೆಗಳನ್ನು ನಡೆಸುವುದು ಅಥವಾ ನಕಲಿ ದಾಖಲೆಗಳನ್ನು ನೀಡುವುದು. ಅರ್ಹತೆಗಾಗಿ ದಾಖಲೆಗಳನ್ನು ತಿದ್ದುವ ಅಪರಾಧಗಳನ್ನು ಈ ಕಾನೂನಿನ ವ್ಯಾಪ್ತಿಗೆ ತರಲಾಗಿದೆ.
ಈ ಕಾನೂನಿನಡಿ ಬರುವ ಅಪರಾಧಗಳು ಜಾಮೀನುರಹಿತ, ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಹಾಯಕ ಪೊಲೀಸ್ ಆಯುಕ್ತರ ಶ್ರೇಣಿಯಲ್ಲಿ ಬರುವ ಯಾವುದೇ ಅಧಿಕಾರಿಯು ಕಾಯಿದೆಯ ಅಡಿಯಲ್ಲಿ ಈ ಅಪರಾಧವನ್ನು ತನಿಖೆ ಮಾಡಬಹುದು.
ಕಾನೂನು ಸ್ಪರ್ಧಾತ್ಮಕ ಪರೀಕ್ಷೆಗಳಾದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC), ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೇಸ್, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುವ ಎಲ್ಲಾ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಒಳಗೊಂಡಿದೆ.
ಭಾರತೀಯ ಸಿಬ್ಬಂದಿ ಶೋಷಣೆ: ಬ್ರಿಟನ್ನ ಶ್ರೀಮಂತ ಹಿಂದುಜಾ ಕುಟುಂಬದ ನಾಲ್ವರು ಸದಸ್ಯರಿಗೆ 4 ವರ್ಷ ಜೈಲು ಶಿಕ್ಷೆ