newsics.com
ನವದೆಹಲಿ: ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಹೊಸ ವೈರಸ್ ಏನಲ್ಲ. ಇದು ಹಲವು ವರ್ಷಗಳಿಂದ ಜಾಗತಿಕವಾಗಿ ಹರಡುತ್ತಿದೆ. ಹೀಗಾಗಿ, ಹೊಸದಾಗಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಇಂದು ಹೇಳಿದ್ದಾರೆ.
ಆರೋಗ್ಯ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಜೊತೆಗೆ ಚೀನಾ ಮತ್ತು ನೆರೆಯ ದೇಶಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. “ವಿಶ್ವ ಆರೋಗ್ಯ ಸಂಸ್ಥೆ (WHO) ಈ ಸೋಂಕಿನ ಬಗ್ಗೆ ಎಚ್ಚರ ವಹಿಸಿದೆ. ಅದರ ವರದಿಯನ್ನು ಶೀಘ್ರದಲ್ಲೇ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
“HMPV ಹೊಸ ವೈರಸ್ ಅಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದು ಗಾಳಿಯ ಮೂಲಕ, ಉಸಿರಾಟದ ಮೂಲಕ ಹರಡುತ್ತದೆ. ಇದು ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲ ಮತ್ತು ವಸಂತಕಾಲದ ಆರಂಭದಲ್ಲಿ ಈ ವೈರಸ್ ಹೆಚ್ಚು ಹರಡುತ್ತದೆ” ಎಂದು ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಚೀನಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಭಾರತದಲ್ಲಿ 6 ಪ್ರಕರಣಗಳ ವರದಿಗಳ ನಂತರ ಆತಂಕ ಹೆಚ್ಚಾಗಿದೆ.