ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷ 2025 ಶುಭ ತರಲಿ.

ವಿಶ್ವದಾದ್ಯಂತ 2025ರ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಮದುವಣಗಿತ್ತಿಯಂತೆ ಸಜ್ಜಾಗಿದೆ. ಪ್ರತಿ ವರ್ಷದಂತೆ ರಾಜ್ಯದ ಹಲವೆಡೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಾ ಪಟಾಕಿ ಹೊಡೆದು ಹೊಸ ಹುರುಪಿನಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ಸಂಜೆಯಿಂದಲೇ ಹೊಸ ವರ್ಷದ ಸಂಭ್ರಮಾಚರಣೆ ಶುರುವಾಗಿತ್ತು. ರಾತ್ರಿಯಾಗುತ್ತಿದ್ದಂತೆ ಮೋಜು-ಮಸ್ತಿ ಹೆಚ್ಚಾಯಿತು. ಈ ಮಧ್ಯೆ ನ್ಯೂ ಇಯರ್ ಆಚರಣೆಗೆ ಮನೆಯಿಂದ ಹೊರ ಬಂದವರಿಗೆ ಟ್ರಾಫಿಕ್ ಬಿಸಿ ತಟ್ಟಿದೆ.
ಇನ್ನು ಸುರಕ್ಷತೆಯ ದೃಷ್ಟಿಯಿಂದ ಬ್ರಿಗೇಡ್ ರಸ್ತೆಯುದ್ದಕ್ಕೂ ಪ್ರತಿ 30 ಮೀಟರ್‌ಗೆ ನಾಲ್ಕು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಬಿಬಿಎಂಪಿಯ 150 ಸಿಸಿ ಕ್ಯಾಮರಾ ಜತೆಗೆ ಬ್ರಿಗೇಡ್ ಹಾಗೂ ಎಂಜಿ ರೋಡ್‌ನಲ್ಲಿ 800ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಪಬ್, ಎಣ್ಣೆ, ಮೋಜು-ಮಸ್ತಿ ಎಂದು ಪಾರ್ಟಿ ಮಾಡಿ ಬಳಿಕ ತಮ್ಮ ವಾಹನಗಳಲ್ಲಿ ರಾತ್ರಿ ಮನೆಗೆ ತೆರಳುವ ಮುನ್ನ ಸ್ವಲ್ಪ ಎಚ್ಚರವಾಗಿರಿ. ಏಕೆಂದರೆ, ಇವತ್ತು ನಿಮಗಾಗಿಯೇ ಸಂಚಾರಿ ಪೊಲೀಸರು ರಸ್ತೆಗಳಲ್ಲಿ ಕಾದು ಕುಳಿತಿದ್ದಾರೆ. ಮಂಗಳವಾರ ರಾತ್ರಿ ರಸ್ತೆ-ರಸ್ತೆಯಲ್ಲೂ ಸಂಚಾರಿ ಪೊಲೀಸರು ಹೈ ಅಲರ್ಟ್ ವಹಿಸಿದ್ದಾರೆ. ನಗರದಾದ್ಯಂತ ಫ್ಲೈಓವರ್‌ಗಳು ಬಂದ್ ಆಗಲಿವೆ.
ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ಗಳಲ್ಲಿ ನೆರೆದಿರುವ ಯುವ ಜನತೆ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.