newsics.com
ಜಾರ್ಜಿಯಾ: ಜಾರ್ಜಿಯಾದ ಗುಡೌರಿ ಪ್ರದೇಶದಲ್ಲಿನ ಮೌಂಟೇನ್ ರೆಸಾರ್ಟ್ ರೆಸ್ಟೋರೆಂಟ್‌ನಲ್ಲಿ 12 ಭಾರತೀಯರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
‘ಮೃತರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಎಲ್ಲರೂ ಕಾರ್ಬನ್ ಮೊನಾಕ್ಸೈಡ್ ವಿಷಕಾರಿ ಸೇವನೆಯಿಂದ ಮೃತಪಟ್ಟಿದ್ದಾರೆ ಎಂದು ಕಚೇರಿ ತಿಳಿಸಿದೆ.
ಮೃತರೆಲ್ಲರೂ ಭಾರತದ ಪ್ರಜೆಗಳಾಗಿದ್ದು, ಭಾರತೀಯ ರೆಸ್ಟೋರೆಂಟ್‌ನಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಯಭಾರ ಕಚೇರಿ, ‘ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸ್ಥಳೀಯ ಅಧಿಕಾರಿಗಳೊಂದಿಗೆ ರಾಯಭಾರ ಕಚೇರಿ ಸಂಪರ್ಕದಲ್ಲಿದೆ. ಮೃತರ ಕುಟುಂಬ ಸದಸ್ಯರಿಗೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡಲಿದ್ದೇವೆ’ ಎಂದು ಹೇಳಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ಕಾರಣ ತಿಳಿದುಬರಲಿದೆ. ಪ್ರಾಥಮಿಕ ತನಿಖೆ ಪ್ರಕಾರ, ಹೋಟೆಲ್ ಒಳ ಆವರಣದಲ್ಲಿ ಪವರ್ ಜನರೇಟರ್ ಇಟ್ಟಿದ್ದು, ಬೆಡ್‌ರೂಂಗೆ ಹತ್ತಿರವಿತ್ತು. ಶುಕ್ರವಾರ ರಾತ್ರಿ ವಿದ್ಯುತ್ ಕಡಿತಗೊಂಡಿದ್ದು, ತದನಂತರ, ಜನರೇಟರ್ ಚಾಲನೆಗೊಂಡು ಅದರಿಂದ ಹೊರಬಂದ ಇಂಗಾಲದ ಮೊನಾಕ್ಸೈಡ್ ಸೇವಿಸಿ, ಮಲಗಿದ್ದವರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.