newsics.com
ಚೆನ್ನೈ: ಕುಂಭಕೋಣಂನ ಪ್ರಸಿದ್ಧ ಸೂರ್ಯನಾರ್ ದೇವಸ್ಥಾನದ ಮಠದ ಮುಖ್ಯಸ್ಥ 54 ವರ್ಷದ ಮಹಾಲಿಂಗ ಸ್ವಾಮಿ, ತಮ್ಮ ಭಕ್ತೆಯಾಗಿದ್ದ ಬೆಂಗಳೂರು ಮೂಲದ 47 ವರ್ಷದ ಹೇಮಶ್ರಿಯೊಂದಿಗೆ ಅಕ್ಟೋಬರ್ 10 ರಂದು ವಿವಾಹವಾದ ಹಿನ್ನೆಲೆಯಲ್ಲಿ ಸ್ವಾಮಿಯವರನ್ನು ಮಠದಿಂದ ಹೊರಹಾಕಲಾಗಿದೆ.
ಅಧೀನಂ (ಮಠದ ಮುಖ್ಯಸ್ಥರು) ಅವರ “ಹಠಾತ್ ಮದುವೆ”ಯನ್ನು ವಾರಗಟ್ಟಲೆ ಮುಚ್ಚಿಡಲಾಗಿತ್ತು. ತಮಿಳುನಾಡಿನಲ್ಲಿ ಈ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು ಮಠದ ಭಕ್ತರು ಮಹಾಲಿಂಗ ಸ್ವಾಮಿಗಳು ಸನ್ಯಾಸತ್ವ ತ್ಯಜಿಸುವುದು ಮಾತ್ರವಲ್ಲದೆ ಶೈವ ಮಠವನ್ನು ತೊರೆಯುವಂತೆಯೇ ಸೂಚನೆ ನೀಡಿದ್ದರು.
ಸೂರ್ಯನಾರ್ ದೇವಾಲಯ ಈ ಪ್ರದೇಶದಲ್ಲಿ ನೂರಾರು ಕೋಟಿಯ ಆಸ್ತಿ ಹೊಂದಿದೆ. ಈ ಪ್ರದೇಶದ ನವಗ್ರಹ ಪೂಜಾ ಸ್ಥಳಗಳಲ್ಲಿ ಒಂದಾದ ಸೂರ್ಯನಾರ್ ದೇವಾಲಯವನ್ನು ನಿರ್ವಹಿಸುವ ಮಠದ ಗ್ರಾಮಸ್ಥರು ಮತ್ತು ಅನುಯಾಯಿಗಳು ಕಳೆದ ಮಂಗಳವಾರ ಮಹಾಲಿಂಗ ಸ್ವಾಮಿಗಳನ್ನು ಮಠದ ಪ್ರಧಾನ ಕಚೇರಿಯಿಂದ ಹೊರಹಾಕಿದಾಗ ವಿಷಯ ಬೆಳಕಿಗೆ ಬಂದಿದೆ.
ಶೈವ ಮಠದಿಂದ ತಮ್ಮನ್ನು ಹೊರಹಾಕಿದ್ದ ಪ್ರತೀಕಾರವಾಗಿ ಹಾಗೂ ಮದುವೆಯನ್ನು ಪ್ರಶ್ನೆ ಮಾಡಿದ್ದಕ್ಕಾಗಿ ತಮ್ಮ ಶಿಷ್ಯ ಸ್ವಾಮಿನಾಥ ಸ್ವಾಮಿಯನ್ನು ವಜಾ ಮಾಡಿದ್ದಲ್ಲದೆ, ಮಠದ ಆಡಳಿತವನ್ನು ವಹಿಸಿಕೊಳ್ಳುವಂತೆ ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಗೆ ಪತ್ರ ಬರೆದಿದ್ದರು.
ಈ ಹಿಂದೆ ಮಠಾಧೀಶರುಗಳು ವಿವಾಹವಾದ ಉದಾಹರಣೆಗಳಿವೆ. ನೋಂದಣಿಯಾಗಿರುವ ನನ್ನ ಮದುವೆ ವೈಯಕ್ತಿಕ ವಿಚಾರ ಎಂದು ಅಧೀನಂ ತನ್ನ ಭಕ್ತರೊಂದಿಗೆ ವಿವಾಹವನ್ನು ಸಮರ್ಥನೆ ಮಾಡಿಕೊಂಡಿದ್ದರು. ಇಡೀ ಪ್ರಕರಣಕ್ಕೆ ತಿರುವು ಎನ್ನುವಂತೆ ತಮಿಳುನಾಡಿನಲ್ಲಿ ಶತಮಾನಗಳ ಹಿಂದೆ ಸ್ಥಾಪಿಸಲಾದ 18 ಶೈವ ಮಠಗಳಲ್ಲಿ ಒಂದಾದ ಮಠದ ಮುಖ್ಯಸ್ಥರಾಗಿ ತಾನೇ ಉಳಿಯುವುದಾಗಿ ಘೋಷಿಸಿದ್ದರು.
ಮಠವನ್ನು ತೊರೆಯಲು ಮಹಾಲಿಂಗ ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದಂತೆ, ಸ್ಥಳೀಯ ಗ್ರಾಮಸ್ಥರು ಮಠವನ್ನು ತೊರೆಯುವಂತೆ ಸ್ವಾಮಿ ಅವರಿಗೆ ಕೇಳಿಕೊಂಡಿದ್ದರು. ಆದರೆ, ಮಹಾಲಿಂಗ ಸ್ವಾಮಿಗಳು ತಮಿಳುನಾಡಿನ ಎಚ್‌ಆರ್ ಮತ್ತು ಸಿಇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಕಾಯುತ್ತಿದ್ದರು ಮತ್ತು ಮಠದ ಆಡಳಿತಾತ್ಮಕ ನಿಯಂತ್ರಣವನ್ನು ಅವರಿಗೆ ವಹಿಸಲು ಪತ್ರ ಹಸ್ತಾಂತರಿಸಿದರು.
ಆಡಳಿತ ನಿಯಂತ್ರಣವನ್ನು ಎಚ್‌ಆರ್ & ಸಿಇಗೆ ವರ್ಗಾಯಿಸುವವರೆಗೆ ನಾನು ಗ್ರಾಮ ತೊರೆಯುವುದಿಲ್ಲ. ಎಲ್ಲವೂ ಮುಗಿದ ನಂತರ, ನಾನು ಕರ್ನಾಟಕಕ್ಕೆ ತೆರಳಲು ಯೋಜಿಸಿದ್ದೇನೆ, ಎಂದು ಮಠಾಧೀಶರು ಬುಧವಾರ ಹೇಳಿದ್ದಾರೆ.
2022 ರಲ್ಲಿ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿರುವ ಸೂರ್ಯನಾರ್ ದೇವಸ್ಥಾನದ ಅಧೀನಂನ 28 ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಮಹಾಲಿಂಗ ಸ್ವಾಮಿಗಳು ಅಕ್ಟೋಬರ್ 10 ರಂದು ಬೆಂಗಳೂರಿನಲ್ಲಿ ಹೇಮಶ್ರೀ ಅವರನ್ನು ವಿವಾಹವಾಗಿದ್ದಾರೆ. ಹೇಮಶ್ರೀ ಮಠದ ಕಟ್ಟಾ ಭಕ್ತರಾಗಿದ್ದಾರೆ.
ಮಹಿಳಾ ನೌಕರರಿಗೆ ಗುಡ್ ನ್ಯೂಸ್ : `ಶಿಶುಪಾಲನಾ ರಜೆ’ ಮಂಜೂರು ಮಾಡಿದ ಸರ್ಕಾರ
ಬಸ್‌ಗಳಲ್ಲಿ ಪುರುಷರಿಗೂ ಉಚಿತ ಪ್ರಯಾಣ: ಡಿಸಿಎಂ ಹೇಳಿಕೆಗೆ ಸಾರಿಗೆ ಸಚಿವರು ಹೇಳಿದ್ದೇನು?