newsics.com
ನವದೆಹಲಿ : ಅಭ್ಯಾಸ ಪಂದ್ಯದ ವೇಳೆ ಕೆಎಲ್ ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ರಾಹುಲ್, ಮಧ್ಯದಲ್ಲಿಯೇ ಬ್ಯಾಟಿಂಗ್ ತೊರೆದು ಡಗೌಟ್ಗೆ ತೆರಳಿದ್ದಾರೆ.
ಪರ್ತ್ ಟೆಸ್ಟ್ ಆರಂಭಕ್ಕೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಬಿರುಸಿನ ಅಭ್ಯಾಸ ನಡೆಸುತ್ತಿದೆ. ನವೆಂಬರ್ 15 ಶುಕ್ರವಾರದಂದು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ತಂಡವನ್ನು ರಚಿಸಿಕೊಂಡು ತಮ್ಮ ತಮ್ಮಲ್ಲೇ ಅಭ್ಯಾಸ ನಡೆಸಿತು. ಈ ವೇಳೆ ಕೆಎಲ್ ರಾಹುಲ್ ಮೊಣಕೈಗೆ ತೀವ್ರ ಪೆಟ್ಟಾಗಿದ್ದು, ಅಭ್ಯಾಸದಿಂದ ಹೊರನಡೆದಿದ್ದಾರೆ.
ಪರ್ತ್‌ನ ಡಬ್ಲ್ಯುಎಸಿಎ ಸ್ಟೇಡಿಯಂನಲ್ಲಿ ಭಾರತ ತಂಡ ಕಳೆದ 3 ದಿನಗಳಿಂದ ನೆಟ್ ಅಭ್ಯಾಸ ನಡೆಸುತ್ತಿದೆ. ತಮ್ಮ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಭಾರತ ತಂಡ ಮತ್ತು ಭಾರತ ಎ ತಂಡಗಳ ನಡುವೆ ಅಭ್ಯಾಸ ಪಂದ್ಯವನ್ನು ಆಡಲಾಯಿತು.
ಈ ವೇಳೆ ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ ವೇಗದ ಚೆಂಡನ್ನು ಪರ್ತ್‌ನ ವೇಗದ ಪಿಚ್‌ನಲ್ಲಿ ರಾಹುಲ್ಗೆ ಎದುರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ರಾಹುಲ್ ಅವರ ಮೊಣಕೈಗೆ ತಗುಲಿತು. ರಾಹುಲ್‌ಗೆ ಚೆಂಡು ಬಲವಾಗಿ ಬಡಿದಿದ್ದು, ಚಿಕಿತ್ಸೆಗಾಗಿ ವೈದ್ಯಕೀಯ ತಂಡವನ್ನು ಕರೆಯಬೇಕಾಯಿತು. ಇದಾದ ಬಳಿಕ ರಾಹುಲ್ ಎದ್ದು ಮತ್ತೆ ಆಡಲು ಯತ್ನಿಸಿದರು. ಆದರೆ ಅಸಹನೀಯ ನೋವಿನಿಂದ ಅವರು ಮೈದಾನದಿಂದ ಹೊರಗೆ ಹೋಗಬೇಕಾಯಿತು.