newsics.com
ಬಳ್ಳಾರಿ/ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಬುಧವಾರ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದ ದರ್ಶನ್ ರಾತ್ರಿ 11.40ರ ವೇಳೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆ ತಲುಪಿದ್ದಾರೆ.
ಸಂಜೆ 6ಕ್ಕೆ ಜೈಲಿನಿಂದ ಹೊರಬಂದ ದರ್ಶನ್, ಪತ್ನಿ ವಿಜಯಲಕ್ಷ್ಮಿ ಜತೆ ಕಾರಿನಲ್ಲಿ ಹೊರಟರು. ಬಳ್ಳಾರಿಯಿಂದ ಆಂಧ್ರಪ್ರದೇಶದ ಗಡಿಯವರೆಗೂ ಪೊಲೀಸರು ಭದ್ರತೆ ನೀಡಿದ್ದಾರೆ. ಬಳಿಕ ಆಂಧ್ರದ ಅನಂತಪುರ ಮಾರ್ಗವಾಗಿ ಅವರು ಬೆಂಗಳೂರು ತಲುಪಿದ್ದಾರೆ.

ದಾರಿಯುದ್ದಕ್ಕೂ ದರ್ಶನ್ ಅಭಿಮಾನಿಗಳು ದರ್ಶನ್ ನೋಡಲು ಮುಗಿಬಿದ್ದಿದ್ದರು. ಮೊದಲು ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆಗೆ ತೆರಳಿದರು. ಮನೆಯ ಬಳಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ದರ್ಶನ್‌ಗೆ ಜೈಕಾರ ಕೂಗಿದರು.
ಇಂದು ದರ್ಶನ್ ಮಗ ವಿನೀಶ್ ಹುಟ್ಟುಹಬ್ಬ ಇದ್ದು, ಮಗನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳೂ ವಿನೀಶ್‌ಗೆ ಶುಭಾಶಯ ಕೋರಿದರು. ರಾಜರಾಜೇಶ್ವರಿ ನಗರ ಹಾಗೂ ಹೊಸಕೆರೆಹಳ್ಳಿ ಮನೆ ಬಳಿ ಪೊಲೀಸ್ ಬಿಗಿಭದ್ರತೆ ನೀಡಲಾಗಿದೆ.
ಬಳ್ಳಾರಿಯಿಂದ ಪತ್ನಿ ವಿಜಯಲಕ್ಷ್ಮಿ, ನಟ ಧನ್ವರ್ ಜತೆ ದರ್ಶನ್ ಪ್ರಯಾಣಿಸಿದರು.