newsics.com
ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದ ಸಿಆರ್‌ಪಿಎಫ್ ಶಾಲೆಯ ಸಮೀಪ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಶಾಲೆಯ ಗೋಡೆಗೆ ಹಾನಿಯಾಗಿದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಸ್ಫೋಟ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರೋಹಿಣಿಯ ಸೆಕ್ಟರ್ 14 ರ ಸಿಆರ್‌ಪಿಎಫ್ ಶಾಲೆಯ ಹೊರ ಗೋಡೆಯ ಬಳಿ ಬೆಳಿಗ್ಗೆ 7.50ರ ಸುಮಾರಿಗೆ ಸ್ಫೋಟ ಸಂಭವಿಸಿತ್ತು. ಕೂಡಸೇ 2 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿತು.
ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದು, ಪರಿಶೀಲನೆ ವೇಳೆ ವೈಟ್ ಪೌಡರ್ ಪತ್ತೆಯಾಗಿದ್ದು, ಇದು ಅನುಮಾನಗಳು ಹೆಚ್ಚಾಗುವಂತೆ ಮಾಡಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ದಟ್ಟ ಹೊಗೆ ಆವರಿಸಿತ್ತು. ಸ್ಫೋಟದ ತೀವ್ರತೆಗೆ ಸಮೀಪದ ಅಂಗಡಿಯ ಗಾಜುಗಳು ಹಾಗೂ ಅಂಗಡಿ ಬಳಿ ನಿಲ್ಲಿಸಿದ್ದ ಕಾರಿನ ಗಾಜುಗಳು ಹಾನಿಗೊಳಗಾಗಿವೆ.