newsics.com
ಕಾರವಾರ: ಕಡಲ ನಗರಿ ಕಾರವಾರದಲ್ಲಿ ಉದ್ಯಮಿಯೋರ್ವನ ಭೀಕರ ಹತ್ಯೆ ಇಡೀ ತಾಲೂಕಿನ ಜನರನ್ನ ಬೆಚ್ಚಿ ಬೀಳಿಸಿದೆ. ಕಳೆದ ಒಂದು ವಾರದ ಹಿಂದೆ ನಡೆದಿದ್ದ ಪ್ರಸಿದ್ದ ಸಾತೇರಿ ದೇವಿಯ ಜಾತ್ರೆಗೆಂದು ಪೂನಾದಿಂದ ಕಾರವಾರಕ್ಕೆ ಬಂದಿದ್ದ ಉದ್ಯಮಿಯನ್ನ ವಾಪಾಸ್ ಊರಿಗೆ ಹೊರಡುವ ವೇಳೆ ಕೊಚ್ಚಿ ಕೊಂದಿದ್ದಾರೆ. ಸದ್ಯ ಉದ್ಯಮಿಯ ಕೊಲೆಯನ್ನ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಜಾಡು ಬೀಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಎನ್ನುವ ಗ್ರಾಮದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಭೀಕರ ಹತ್ಯೆ ನಡೆದಿರುವುದು ಇಡೀ ತಾಲೂಕಿನ ಜನರನ್ನ ಬೆಚ್ಚಿ ಬೀಳಿಸಿದೆ. ಗ್ರಾಮದ ವಿನಾಯಕ ನಾಯ್ಕ ಎನ್ನುವ ವ್ಯಕ್ತಿಯನ್ನ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾರೆ. ಮೂಲಕ ಹಣಕೋಣ ಗ್ರಾಮದ ವಿನಾಯಕ ನಾಯ್ಕ ಹಲವು ವರ್ಷದ ಹಿಂದೆಯೇ ಕೆಲಸಕ್ಕೆಂದು ಪೂನಾಕ್ಕೆ ತೆರಳಿ ಅಲ್ಲಿಯೇ ವಾಸವಾಗಿದ್ದರು. ಇಂಪೋರ್ಟ್ ಎಂಡ್ ಎಕ್ಸಪೋರ್ಟ್ ವ್ಯವಹಾರ ಮಾಡುತ್ತಿದ್ದ ವಿನಾಯಕ ವ್ಯವಹಾರದಲ್ಲೂ ಉತ್ತಮ ಹೆಸರು ಗಳಿಸಿ ಆರ್ಥಿಕವಾಗಿ ಸಭಲರಾಗಿದ್ದರು. ಇನ್ನು ಗ್ರಾಮಕ್ಕೆ ಪ್ರತಿ ವರ್ಷ ಎರಡು ಬಾರಿ ವಿನಾಯಕ್ ಆಗಮಿಸುತ್ತಿದ್ದನು. ಹೋಳಿ ಹಾಗೂ ಗಣಪತಿ ಹಬ್ಬದ ಸಂದರ್ಭದಲ್ಲಿ ಆಗಮಿಸಿ ಸಾತೇರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ವಾಪಾಸ್ ತೆರಳುತ್ತಿದ್ದನು. ಇವತ್ತು ಬೆಳಿಗ್ಗೆ 5.30ರ ವೇಳೆಗೆ ವಾಪಾಸ್ ಪೂನಾಕ್ಕೆ ತೆರಳಲು ವಿನಾಯಕ್ ಸಿದ್ದನಾಗಿದ್ದಾನೆ. ಬೆಳಿಗ್ಗೆ ಬಟ್ಟೆಗಳನ್ನ ಕಾರಿನಲ್ಲಿ ಇಡಲು ಬಾಗಿಲು ತೆಗೆಯುತ್ತಿದ್ದಂತೆ ಮೂವರು ಅಪರಿಚಿತರು ವಿನಾಯಕನ ಮೇಲೆ ದಾಳಿಗೆ ಇಳಿದಿದ್ದಾರೆ. ದಾಳಿ ಭೀಕರತೆ ಹೇಗಿತ್ತೆಂದರೆ ವಿನಾಯಕನ ಭುಜವೇ ತುಂಡಾಗಿದ್ದು ಸ್ಥಳದಲ್ಲೇ ಕುಸಿದು ಬಿದ್ದ ಆತ ಮೃತಪಟ್ಟಿದ್ದಾನೆ. ಇನ್ನು ಈ ವೇಳೆ ಸದ್ದು ಕೇಳಿ ಓಡಿ ಬಂದ ಪತ್ನಿಯ ಮೇಲೆ ಸಹ ಹಲ್ಲೆಯಾಗಿದ್ದು ಆಕೆಯನ್ನ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ವಿನಾಯಕ ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಇಳಿದಿದೆ. ಕಾರಿನಲ್ಲಿ ಬಂದ ಅಪರಿಚಿತರು ದುಷ್ಕೃತ್ಯ ಎಸೆಗಿ ಪರಾರಿಯಾಗಿದ್ದು ಗ್ರಾಮಕ್ಕೆ ತೆರಳುವ ರಸ್ತೆಗಳಲ್ಲಿನ ಸಿಸಿಟಿವಿಯಲ್ಲಿ ಕಾರಿನ ಓಡಾಟವನ್ನ ಗಮನಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿನಾಯಕನ ಹತ್ಯೆ ಉದ್ಯಮದಲ್ಲಿನ ದ್ವೇಷ ಕಾರಣ ಇರಬಹುದು ಎನ್ನುವ ಅಂದಾಜು ಮಾಡಲಾಗಿತ್ತು. ಆದರೆ ಸದ್ಯ ವೈಯಕ್ತಿಕ ವಿಚಾರದಲ್ಲೂ ಕೊಲೆಯಾಗಿರಬಹುದು ಎನ್ನುವ ಅಂದಾಜು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.