newsics.com | ನ್ಯೂಸಿಕ್ಸ್
ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದೀಗ ಬೆಂಗಳೂರಿನ ಯಶವಂತಪುರದ 52 ವರ್ಷದ ವಿಚ್ಛೇದಿತ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯ ಮಾತು ನಂಬಿ ಬರೋಬ್ಬರಿ 1.7 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆಯ ವಿವರದ ಪ್ರಕಾರ, ಜೂನ್ 12ರಂದು ಮಹಿಳೆಗೆ ಫೇಸ್‌ಬುಕ್‌ನಲ್ಲಿ “ಸಾಹಿಲ್ ಜಗ್ಗಲ್” ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಸ್ನೇಹ ವಿನಂತಿ ಬಂದಿತ್ತು. ಆತ ತಾನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಉದ್ಯೋಗದಲ್ಲಿರುವ ಭಾರತೀಯ ಎಂದು ಹೇಳಿಕೊಂಡಿದ್ದ. ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಆತ್ಮೀಯ ಮಾತುಕತೆ ಆರಂಭವಾಗಿ, ನಂತರ ವಾಟ್ಸ್‌ಆ್ಯಪ್ ಮೂಲಕವೂ ಸಂಪರ್ಕ ಮುಂದುವರಿದಿತ್ತು. ಈ ವೇಳೆ ಮಹಿಳೆ ತನ್ನ ವೈಯಕ್ತಿಕ ಜೀವನದ ಮಾಹಿತಿಯನ್ನೂ ಆತನೊಂದಿಗೆ ಹಂಚಿಕೊಂಡಿದ್ದಳು.
ನಂತರ ಆರೋಪಿ ಮಹಿಳೆಗೆ ದುಬಾರಿ ಸೀರೆ, ಚಿನ್ನಾಭರಣ, ವಜ್ರಾಭರಣ ಹಾಗೂ ಇತರ ಉಡುಗೊರೆಗಳನ್ನು ಕಳುಹಿಸುವುದಾಗಿ ಹೇಳಿ ಅವುಗಳ ಫೋಟೋಗಳು ಮತ್ತು ನಕಲಿ ಕೊರಿಯರ್ ರಸೀದಿಗಳನ್ನು ಕಳುಹಿಸಿದ್ದ. ಇದರಿಂದ ಮಹಿಳೆಗೆ ಆತನ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚಾಗಿತ್ತು.
ಕೆಲ ದಿನಗಳ ಬಳಿಕ ತನ್ನನ್ನು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಮತ್ತೊಬ್ಬ ವ್ಯಕ್ತಿ ಮಹಿಳೆಗೆ ಕರೆ ಮಾಡಿ, ಉಡುಗೊರೆಗಳ ಪಾರ್ಸೆಲ್ ದೆಹಲಿಯ ಕಸ್ಟಮ್ಸ್‌ನಲ್ಲಿ ಸಿಲುಕಿದ್ದು, ಬಿಡುಗಡೆ ಮಾಡಲು ಶುಲ್ಕ ಪಾವತಿಸಬೇಕು ಎಂದು ಹೇಳಿದ್ದ. ಆರೋಪಿ ತನ್ನ ಬಳಿ ಭಾರತೀಯ ಕರೆನ್ಸಿ ಇಲ್ಲ ಎಂದು ಹೇಳಿ ಮಹಿಳೆಯಿಂದಲೇ ಹಣ ಪಾವತಿಸುವಂತೆ ಮನವೊಲಿಸಿದ್ದ. ಆರಂಭದಲ್ಲಿ ಮಹಿಳೆ ಸುಮಾರು 40 ಲಕ್ಷ ರೂಪಾಯಿಯನ್ನು ಆರ್‌ಟಿಜಿಎಸ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಳು. ನಂತರ ಮತ್ತೆ ಮತ್ತೆ ವಿವಿಧ ಕಾರಣಗಳನ್ನು ಹೇಳಿ ಹಣ ಕೇಳಲಾಗಿತ್ತು. ಕೆಲವು ಸಂದರ್ಭಗಳಲ್ಲಿ ನಗದು ಹಣವನ್ನು ನೇರವಾಗಿ ಬಂದು ಪಡೆದುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಂಚಕರು ಪ್ರತಿಯೊಂದು ಬಾರಿ ಹಣ ಸಂಗ್ರಹಿಸಲು ಬೇರೆ ಬೇರೆ ವ್ಯಕ್ತಿಗಳನ್ನು ಕಳುಹಿಸುತ್ತಿದ್ದರು. ಹಣ ಪಡೆಯಲು ಬರುವ ವ್ಯಕ್ತಿಯ ಕೈಯಲ್ಲಿ ಇರುವ ₹10 ನೋಟಿನ ಸರಣಿ ಸಂಖ್ಯೆಯನ್ನು ಮುಂಚಿತವಾಗಿಯೇ ಮಹಿಳೆಗೆ ಕಳುಹಿಸುತ್ತಿದ್ದರು. ಇದರಿಂದ ಎಲ್ಲವೂ ಅಧಿಕೃತ ಪ್ರಕ್ರಿಯೆಯೇ ಎಂಬ ನಂಬಿಕೆ ಮಹಿಳೆಗೆ ಮೂಡಿತ್ತು. ಹೀಗೆ ಹಲವು ಕಂತುಗಳಲ್ಲಿ ಒಟ್ಟು 1.7 ಕೋಟಿ ರೂಪಾಯಿ ವಂಚಕರ ಕೈ ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊನೆಗೆ ಅನುಮಾನಗೊಂಡ ಮಹಿಳೆ ಯುಕೆ ವ್ಯಕ್ತಿಗೆ ಕರೆ ಮಾಡಿದಾಗ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿತ್ತು. ಆಗ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ತಕ್ಷಣ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬ್ಯಾಂಕ್ ವ್ಯವಹಾರಗಳು, ಮೊಬೈಲ್ ಸಂಖ್ಯೆಗಳು ಹಾಗೂ ಹಣ ಸಂಗ್ರಹಿಸಿದ ವ್ಯಕ್ತಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ವಿದೇಶದಿಂದ ಉಡುಗೊರೆ ಕಳುಹಿಸುತ್ತೇವೆ, ಕಸ್ಟಮ್ಸ್ ಶುಲ್ಕ ಪಾವತಿಸಿ ಎಂಬ ಸಂದೇಶಗಳು ಅಥವಾ ಕರೆಗಳು ಬಂದರೆ ಅವುಗಳನ್ನು ನಂಬಬಾರದು. ಯಾವುದೇ ಅನುಮಾನಾಸ್ಪದ ಹಣ ವರ್ಗಾವಣೆ ಮಾಡುವ ಮೊದಲು ಪೊಲೀಸ್ ಅಥವಾ ಸೈಬರ್ ಸಹಾಯವಾಣಿ ಸಂಪರ್ಕಿಸುವಂತೆ ಸೂಚಿಸಿದ್ದಾರೆ.