newsics.com | ನ್ಯೂಸಿಕ್ಸ್
ದೇಶಾದ್ಯಂತ ಇಂದು ಕಾರ್ಗಿಲ್ ವಿಜಯ ದಿನವನ್ನು (Kargil Vijay Diwas) ಅತ್ಯಂತ ಹೆಮ್ಮೆಯಿಂದ ಆಚರಿಸಲಾಗುತ್ತದೆ. ಭಾರತೀಯರ ಪಾಲಿಗೆ ಜುಲೈ 26 ಕೇವಲ ಒಂದು ವಿಜಯದ ದಿನವಲ್ಲ, ಬದಲಿಗೆ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಕೆಚ್ಚೆದೆಯ ಯೋಧರ ಶೌರ್ಯ, ಪರಾಕ್ರಮ ಮತ್ತು ತ್ಯಾಗವನ್ನು ಸ್ಮರಿಸುವ ಪವಿತ್ರ ಸಂದರ್ಭವಾಗಿದೆ.
ಯುದ್ಧದ ಕಿಚ್ಚು ಹೊತ್ತಿಸಿದ್ದು ಯಾಕೆ?
ಸ್ವಾತಂತ್ರ್ಯದ ನಂತರದ ದಿನಗಳಿಂದಲೂ ಕಾಶ್ಮೀರ ವಿವಾದ ಎರಡೂ ದೇಶಗಳ ನಡುವೆ ಇದ್ದೇ ಇತ್ತು. ಹೇಗಾದರೂ ಮಾಡಿ ಕಣಿವೆ ರಾಜ್ಯವನ್ನು ಕಬಳಿಸಬೇಕೆಂಬ ಹಠಕ್ಕೆ ಬಿದ್ದ ಪಾಕಿಸ್ತಾನ, ಭಾರತದ ವಿರುದ್ಧ ಗುಪ್ತ ತಂತ್ರ ರೂಪಿಸಿತು. ಅಂದಿನ ಪಾಕ್ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ನೇತೃತ್ವದಲ್ಲಿ ‘ಆಪರೇಷನ್ ಬದ್ರ್’ ಹೆಸರಿನಲ್ಲಿ ಈ ಕರಾಳ ಸಂಚು ರೂಪುಗೊಂಡಿತು.
ಚಳಿಗಾಲದಲ್ಲಿ ಕಾರ್ಗಿಲ್ ಭಾಗದಲ್ಲಿ ತಾಪಮಾನ ಮೈನಸ್ ಡಿಗ್ರಿಗೂ ಕುಸಿಯುವುದರಿಂದ, ಎರಡೂ ಕಡೆಯ ಸೈನಿಕರು ಅಲ್ಲಿಂದ ತಾತ್ಕಾಲಿಕವಾಗಿ ಕೆಳಗೆ ಬರುವುದು ವಾಡಿಕೆ. ಇದೇ ಸಮಯವನ್ನು ಕಾದು ಕುಳಿತ ಪಾಕಿಸ್ತಾನಿ ಸೈನಿಕರು, ಸ್ಥಳೀಯ ಉಗ್ರರಂತೆ ವೇಷ ಧರಿಸಿ ರಹಸ್ಯವಾಗಿ ನಿಯಂತ್ರಣ ರೇಖೆಯನ್ನು (LoC) ದಾಟಿದರು. ಲಡಾಖ್‌ನ ಕಾರ್ಗಿಲ್, ಡ್ರಾಸ್, ಬಟಾಲಿಕ್ ಮತ್ತು ಕಕ್ಸರ್ ವಲಯಗಳ ಪ್ರಮುಖ ಭಾರತೀಯ ನೆಲೆಗಳನ್ನು ಅಕ್ರಮವಾಗಿ ವಶಕ್ಕೆ ಪಡೆದರು. ಅಷ್ಟೇ ಅಲ್ಲದೆ, ಶ್ರೀನಗರ-ಲೇಹ್ ಹೆದ್ದಾರಿಯನ್ನು (NH-1A) ಬಂದ್ ಮಾಡಿ ಭಾರತೀಯ ಸೇನೆಗೆ ಸರಬರಾಜಾಗುತ್ತಿದ್ದ ಆಹಾರ ಹಾಗೂ ಶಸ್ತ್ರಾಸ್ತ್ರಗಳನ್ನು ತಡೆಯುವುದು ಅವರ ದುಷ್ಟಯೋಚನೆಯಾಗಿತ್ತು.
ಆಪರೇಷನ್ ವಿಜಯ್: ಸಾಹಸದ ರೋಚಕ ಪಯಣ
ಶತ್ರುಗಳ ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಭಾರತ ಸರ್ಕಾರ ಕ್ಷಿಪ್ರವಾಗಿ ಎಚ್ಚೆತ್ತುಕೊಂಡು “ಆಪರೇಷನ್ ವಿಜಯ್” ಹೆಸರಿನಲ್ಲಿ ದಿಟ್ಟ ಕಾರ್ಯಾಚರಣೆಗೆ ಚಾಲನೆ ನೀಡಿತು. ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಸೈನಿಕರನ್ನು ರಣರಂಗಕ್ಕೆ ಇಳಿಸಲಾಯಿತು.
ಮೇ 5 ರಂದು ಮುನ್ನಲೆಗೆ ಬಂದ ಈ ಕಾಳಗ ಸುಮಾರು 85 ದಿನಗಳ ಕಾಲ ಮುಂದುವರಿಯಿತು. ಮೈನಸ್ ಡಿಗ್ರಿ ಕೊರೆಯುವ ಚಳಿ, ಆಮ್ಲಜನಕದ ತೀವ್ರ ಕೊರತೆ ಮತ್ತು ಬೀಸುವ ಹಿಮಗಾಳಿಯನ್ನು ಲೆಕ್ಕಿಸದೆ ನಮ್ಮ ಸೈನಿಕರು ಕಡಿದಾದ ಬೆಟ್ಟಗಳನ್ನು ಏರಿದರು. ಶತ್ರುಗಳ ಸತತ ಗುಂಡಿನ ಮಳೆಯನ್ನು ಲೆಕ್ಕಿಸದೆ ರಾತ್ರಿಯ ಕತ್ತಲೆಯಲ್ಲಿ ಮುನ್ನುಗ್ಗಿದ್ದು ನಿಜಕ್ಕೂ ಸಾಹಸಮಯವಾಗಿತ್ತು. ನಿಯಂತ್ರಣ ರೇಖೆಯನ್ನು ಮೀರದೆ, ಕೇವಲ ತನ್ನ ಗಡಿಯೊಳಗೆ ನುಗ್ಗಿದ್ದ ಶತ್ರುಗಳನ್ನು ಮಟ್ಟಹಾಕುವ ಕಠಿಣ ಸವಾಲನ್ನು ಭಾರತೀಯ ಸೇನೆ ಮೆಟ್ಟಿನಿಂತಿತು.
ಯುದ್ಧದ ದಿಕ್ಕನ್ನೇ ಬದಲಿಸಿದ ಟೋಲೋಲಿಂಗ್, ಟೈಗರ್ ಹಿಲ್ ಹಾಗೂ ಪಾಯಿಂಟ್ 4875 ನಂತಹ ದುರ್ಗಮ ಶಿಖರಗಳನ್ನು ನಮ್ಮ ಯೋಧರು ಮರುಪಡೆದರು. ಅದರಲ್ಲೂ ಟೈಗರ್ ಹಿಲ್ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಆ ದೃಶ್ಯ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಅಂತಿಮವಾಗಿ ಜುಲೈ 26, 1999 ರ ಹೊತ್ತಿಗೆ ಕಾರ್ಗಿಲ್ ನೆಲವನ್ನು ಶತ್ರು ಮುಕ್ತಗೊಳಿಸುವಲ್ಲಿ ಭಾರತೀಯ ಸೇನೆ ಸಂಪೂರ್ಣ ಯಶಸ್ಸು ಕಂಡಿತು.
ಹುತಾತ್ಮರ ಬಲಿದಾನ ಮತ್ತು ಗೌರವ
ಈ ಭೀಕರ ಯುದ್ಧದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಅನುಜ್ ನಯ್ಯರ್, ಮನೋಜ್ ಕುಮಾರ್ ಪಾಂಡೆ, ಯೋಗೇಂದ್ರ ಸಿಂಗ್ ಯಾದವ್ ಸೇರಿದಂತೆ ನೂರಾರು ಯೋಧರು ಪ್ರಾಣದ ಹಂಗು ತೊರೆದು ಹೋರಾಡಿದರು. ಈ ಹೋರಾಟದಲ್ಲಿ ನಮ್ಮ 545 ವೀರ ಯೋಧರು ಹುತಾತ್ಮರಾದರೆ, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡರು.
ಅತ್ಯುನ್ನತ ಶೌರ್ಯ ಮೆರೆದ ನಾಲ್ವರಿಗೆ ದೇಶದ ಅತ್ಯುನ್ನತ ಪರಮ ವೀರ ಚಕ್ರ, ಹತ್ತು ಮಂದಿಗೆ ಮಹಾವೀರ ಚಕ್ರ ಹಾಗೂ ಎಪ್ಪತ್ತು ಯೋಧರಿಗೆ ವೀರ ಚಕ್ರ ನೀಡಿ ಗೌರವಿಸಲಾಯಿತು. ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕವು ನಮ್ಮ ಸೈನಿಕರ ಧೈರ್ಯ ಹಾಗೂ ಮಾತೃಭೂಮಿಯ ಮೇಲಿನ ಪ್ರೀತಿಗೆ ಎಂದೆಂದಿಗೂ ಸಾಕ್ಷಿಯಾಗಿ ನಿಂತಿದೆ.
CWG 2026 ಜಿಮ್ನಾಸ್ಟಿಕ್ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ ನೋಡಿ