newsics.com | ನ್ಯೂಸಿಕ್ಸ್
ಬೆಂಗಳೂರು: ಸ್ಲಿಂ ವ್ಯಕ್ತಿಯ ಮೊದಲ ವಿವಾಹ ಅನೂರ್ಜಿತವಾಗಿಲ್ಲದಿದ್ದರೆ ಅಥವಾ ರದ್ದಾಗಿಲ್ಲವಾದರೆ ವಿಶೇಷ ವಿವಾಹ ಕಾಯಿದೆಯಡಿ ಎರಡನೇ ವಿವಾಹ ಮಾಡಿಕೊಂಡರೆ ಅದು ಅನೂರ್ಜಿತವಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಅಲ್ಲದೆ, ಮುಸ್ಲಿಂ ವೈಯಕ್ತಿಕ ಕಾನೂನು ಆ ಸಮುದಾಯದ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ವಿವಾಹ ಮಾಡಿಕೊಳ್ಳಲು ಅವಕಾಶ ನೀಡುತ್ತದೆ.
ಆದರೆ, ವಿಶೇಷ ವಿವಾಹ ಕಾಯಿದೆಯಡಿ ವಿವಾಹವಾಗಲು ಕಕ್ಷಿದಾರರು ಆಯ್ಕೆ ಮಾಡಿಕೊಂಡರೆ ಆಗ ಕಾನೂನು ಸ್ಥಿತಿಗತಿ ಸಂಪೂರ್ಣ ಬದಲಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಮುಸ್ಲಿಂ ವ್ಯಕ್ತಿಯ ಎರಡನೇ ಪತ್ನಿ ಬಳ್ಳಾರಿಯ ಮೀನಾಕುಮಾರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಮತ್ತೊಂದು ವಿವಾಹ ಅಸಾಧ್ಯ
ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ”ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರು ಬಹು ವಿವಾಹ ಮಾಡಿಕೊಳ್ಳಲು ಅವಕಾಶ ನೀಡಿದ್ದರೂ, ವೈಯಕ್ತಿಕ ಕಾನೂನಿನಡಿ ವಿವಾಹಗಳು ಶಾಸ್ತ್ರೋಕ್ತವಾಗಿ ನಡೆದರೆ ಮಾತ್ರ ಈ ಕಾನೂನು ಸ್ಥಾನವು ಚಾಲ್ತಿಯಲ್ಲಿರುತ್ತದೆ. ವಿಶೇಷ ವಿವಾಹ ಕಾಯಿದೆಯಡಿ ವಿವಾಹವಾಗಲು ಕಕ್ಷಿದಾರರು ಆಯ್ಕೆ ಮಾಡಿಕೊಂಡರೆ ಕಾನೂನುಬದ್ಧವಾಗುತ್ತದೆ. ಆಗ ಈಗಾಗಲೇ ವಿವಾಹವಾದ ವ್ಯಕ್ತಿಯ ಹಿಂದಿನ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರೆ ಈ ಕಾಯಿದೆಯಡಿ ಮತ್ತೊಂದು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ,” ಎಂದು ಆದೇಶಿಸಿದೆ.
ಅಲ್ಲದೆ, ”ಒಮ್ಮೆ ವಾದಿ-ಪ್ರತಿವಾದಿ ತಮ್ಮ ವೈಯಕ್ತಿಕ ಕಾನೂನಿನ ಬದಲು ಕಾಯಿದೆಯ ನಿಬಂಧನೆಗಳನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿದರೆ, ಅವರು ಸಂಸತ್ತು ಜಾರಿಗೊಳಿಸಿದ ಕಡ್ಡಾಯ ಶಾಸನಬದ್ಧ ಆಡಳಿತಕ್ಕೆ ತಮ್ಮನ್ನು ತಾವು ಒಳಪಡಿಸಿಕೊಳ್ಳುತ್ತಾರೆ. ಆದ್ದರಿಂದ ಅಂತಹ ವಿವಾಹದಿಂದ ಬರುವ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ವೈಯಕ್ತಿಕ ಕಾನೂನಿನಿಂದ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಕಾಯಿದೆಯ ನಿಬಂಧನೆಗಳಿಂದ ಮಾತ್ರ ನಿರ್ಧರಿಸಲಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದೆ.
2008ರಲ್ಲಿ ವಿವಾಹವಾಗಿದ್ದ ಮಹಿಳೆ
ವಿಶೇಷ ವಿವಾಹ ಕಾಯಿದೆಯಡಿ 2008ರಲ್ಲಿ ಮುಸ್ಲಿಂ ಪುರುಷನನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು ತನ್ನನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ”ವಿಶೇಷ ವಿವಾಹ ಕಾಯಿದೆಯಡಿ ಎರಡನೇ ವಿವಾಹವಾದಾಗ ಅರ್ಜಿದಾರರ ಮೊದಲ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರಿಂದ ಅರ್ಜಿದಾರರು ಮತ್ತು ಮೃತ ವ್ಯಕ್ತಿಯ ನಡುವಿನ ವಿವಾಹವು ಅನೂರ್ಜಿತವಾಗಿದೆ,” ಎಂದು ನ್ಯಾಯಾಲಯವು ಹೇಳಿದೆ.
ಜತೆಗೆ ವಿಶೇಷ ವಿವಾಹ ಕಾಯಿದೆ ಸೆಕ್ಷನ್ 4(ಎ) ಪ್ರಕಾರ ಮೊದಲ ಮದುವೆ ರದ್ದಾಗದೇ ಇದ್ದಾಗ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಹಿಂದಿನ ವಿವಾಹ ಚಾಲ್ತಿಯಲ್ಲಿರುವುದರಿಂದ ಕಾಯಿದೆಯಡಿ ನಡೆದ ವಿವಾಹವು ಅನೂರ್ಜಿತವಾಗಿದೆ. ಅಲ್ಲದೆ, ಅದು ಪತಿ ಮತ್ತು ಪತ್ನಿಯ ಕಾನೂನುಬದ್ಧ ಸ್ಥಾನಮಾನವನ್ನು ಪಕ್ಷಕಾರರಿಗೆ ನೀಡುವುದಿಲ್ಲ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
CWG 2026 ಜಿಮ್ನಾಸ್ಟಿಕ್ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ ನೋಡಿ