newsics.com | ನ್ಯೂಸಿಕ್ಸ್
ಮುಂಬೈ: ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ಎರಡೂ ವಾಹನಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಒಟ್ಟು 6 ಜನರು ಸ್ಥಳದಲ್ಲೇ ಜೀವಂತವಾಗಿ ಸುಟ್ಟು ಕರಕಲಾಗಿರುವ ಘಟನೆ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಎಥೆನಾಲ್ ಸಾಗಿಸುತ್ತಿದ್ದ ಕಂಟೇನರ್ ಲಾರಿಯೊಂದು ಮೊದಲು ಅಪಘಾತಕ್ಕೀಡಾಗಿತ್ತು. ಇದರಿಂದಾಗಿ ಹೆದ್ದಾರಿಯಲ್ಲಿ ಇಂಧನ ಸೋರಿಕೆಯಾಗತೊಡಗಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಾಹನಗಳ ಸಂಚಾರವನ್ನು ಮತ್ತೊಂದು ಲೇನ್‌ಗೆ ತಿರುಗಿಸಿದ್ದರು.
ಇದೇ ಸಮಯದಲ್ಲಿ ಪುಣೆಯಿಂದ ವಾರ್ಧಾ ಕಡೆಗೆ ಕಾರೊಂದು ಚಲಿಸುತ್ತಿತ್ತು. ಈ ಕಾರಿನ ಹಿಂಭಾಗದಲ್ಲಿ ಮೆಣಸಿನಕಾಯಿ ಲೋಡ್ ಮಾಡಿಕೊಂಡಿದ್ದ ಲಾರಿಯೊಂದು ಅತಿವೇಗವಾಗಿ ಬರುತ್ತಿತ್ತು. ನಿಯಂತ್ರಣ ತಪ್ಪಿದ ಆ ಲಾರಿ ರಸ್ತೆಯಲ್ಲೇ ಪಲ್ಟಿಯಾಗಿ, ಮುಂದೆ ಹೋಗುತ್ತಿದ್ದ ಕಾರಿಗೆ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಲಾರಿಯ ಅಡಿಗೆ ಸಿಲುಕಿ ನಜ್ಜುಗುಜ್ಜಾಯಿತು. ಅಷ್ಟರಲ್ಲೇ ಇಂಧನ ಟ್ಯಾಂಕ್ ಒಡೆದು ಎರಡೂ ವಾಹನಗಳಿಗೆ ಕ್ಷಣಾರ್ಧದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಹಾಗೂ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ.
ಬೆಂಕಿಯ ಜ್ವಾಲೆಗೆ ಮೃತದೇಹಗಳು ಗುರುತು ಸಿಗದಂತೆ ಸುಟ್ಟು ಹೋಗಿವೆ. ಮೃತರನ್ನು ವಾರ್ಧಾ ಜಿಲ್ಲೆಯ ಸಾಲೋಡ್ ಗ್ರಾಮದ ನಿವಾಸಿಗಳಾದ ರಾಜೇಶ್ ಟಿಪ್ಲೆ, ಅವರ ಪತ್ನಿ ಸುಷ್ಮಾ ಟಿಪ್ಲೆ, ಮಗಳು ಜಾಹ್ನವಿ ಟಿಪ್ಲೆ ಹಾಗೂ ಕಾರಿನ ಚಾಲಕ ಅಂಕುಶ್ ರಾವತ್ ಎಂದು ಗುರುತಿಸಲಾಗಿದೆ. ಉಳಿದಿಬ್ಬರು ಮೃತರನ್ನು ಲಾರಿ ಚಾಲಕ ಸಂಜಯ್ ಕುಮಾರ್ ಮತ್ತು ಕ್ಲೀನರ್ ಸಮರ್ಜಿತ್ ಪಾಲ್ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.