newsics.com | ನ್ಯೂಸಿಕ್ಸ್
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೊನೆಗೂ ಸಂಪುಟ ವಿಸ್ತರಣೆಯ ಕಸರತ್ತು ಆರಂಭವಾಗಿದೆ. ನೂತನ ಸಚಿವರ ಅಂತಿಮ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜುಲೈ 5 ರಂದು ದೆಹಲಿಗೆ ತೆರಳಲಿದ್ದು, ಜುಲೈ 10 ರಿಂದ 12 ರ ಒಳಗೆ ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ.
ಜುಲೈ 10 ರಿಂದ 12ರ ಒಳಗೆ ಪ್ರಮಾಣ ವಚನ?
ರಾಜಕೀಯ ಮೂಲಗಳ ಪ್ರಕಾರ, ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಸಹ ರಾಷ್ಟ್ರ ರಾಜಧಾನಿಗೆ ತಲುಪಲಿದ್ದು, ಜುಲೈ 6 ಮತ್ತು 7 ರಂದು ಎಐಸಿಸಿ ವರಿಷ್ಠರ ಸಮ್ಮುಖದಲ್ಲಿ ಹೈಪ್ರೊಫೈಲ್ ಸಭೆಗಳು ಜರುಗಲಿವೆ. ವರಿಷ್ಠರ ಜೊತೆಗಿನ ಈ ಕೊನೆಯ ಸುತ್ತಿನ ಮಾತುಕತೆ ಯಶಸ್ವಿಯಾದರೆ, ಜುಲೈ 10 ರಿಂದ 12 ರ ಅವಧಿಯಲ್ಲಿ ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ರಾಜಭವನದಲ್ಲಿ ನೆರವೇರುವ ಸಾಧ್ಯತೆ ದಟ್ಟವಾಗಿದೆ.
ಸಂಪುಟ ಸೇರಲು ಹಿರಿಯ ಹಾಗೂ ಪ್ರಭಾವಿ ನಾಯಕರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ವಲಯವಾರು ಚರ್ಚೆಯಲ್ಲಿರುವ ಪ್ರಮುಖ ಹೆಸರುಗಳು ಹೀಗಿವೆ.
- ಉತ್ತರ ಮತ್ತು ಕಲ್ಯಾಣ ಕರ್ನಾಟಕ: ಬೆಳಗಾವಿಯಿಂದ ಲಕ್ಷ್ಮಣ ಸವದಿ, ಹುಬ್ಬಳ್ಳಿ-ಧಾರವಾಡದಿಂದ ಪ್ರಸಾದ್ ಅಬ್ಬಯ್ಯ ಅವರ ಹೆಸರು ಕೇಳಿಬರುತ್ತಿದೆ. ವಿಜಯಪುರ ಜಿಲ್ಲೆಯಿಂದ ಯಶವಂತರಾಯ ಪಾಟೀಲ ಅಥವಾ ಅಪ್ಪಾಜಿ ನಾಡಗೌಡ ಅವರ ಮಧ್ಯೆ ಫೈಟ್ ಇದ್ದು, ಅಲ್ಪಸಂಖ್ಯಾತ ಕೋಟಾದಡಿ ಸಲೀಂ ಅಹ್ಮದ್ ರೇಸ್‌ನಲ್ಲಿದ್ದಾರೆ.
- ಮಧ್ಯ ಕರ್ನಾಟಕ ಭಾಗ: ಬಳ್ಳಾರಿಯಿಂದ ನಾಗೇಂದ್ರ, ಕೊಪ್ಪಳದಿಂದ ಬಸವರಾಜ ರಾಯರೆಡ್ಡಿ, ಹಾವೇರಿಯಿಂದ ರುದ್ರಪ್ಪ ಲಮಾಣಿ ಹಾಗೂ ಶಿವಮೊಗ್ಗದಿಂದ ಬೇಳೂರು ಗೋಪಾಲಕೃಷ್ಣ ಒಲವು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದಾವಣಗೆರೆಯಿಂದ ಎಸ್.ಎಸ್. ಮಲ್ಲಿಕಾರ್ಜುನ್ ಅಥವಾ ಡಿ.ಗಿ. ಶಾಂತನಗೌಡ ಮತ್ತು ಚಿತ್ರದುರ್ಗದಿಂದ ರಘುಮೂರ್ತಿ ಸ್ಪರ್ಧೆಯಲ್ಲಿದ್ದಾರೆ.
- ಹಳೇ ಮೈಸೂರು ಹಾಗೂ ಬಯಲುಸೀಮೆ: ತುಮಕೂರಿನಿಂದ ಶ್ರೀನಿವಾಸ್ (ವಾಸು), ಹಾಸನದಿಂದ ಶಿವಲಿಂಗೇಗೌಡ, ಕೋಲಾರದಿಂದ ಶರತ್ ಬಚ್ಚೇಗೌಡ ಅಥವಾ ಸುಬ್ಬಾರೆಡ್ಡಿ ಅವರ ಹೆಸರು ಪರಿಗಣನೆಯಲ್ಲಿದೆ. ಮಂಡ್ಯದಿಂದ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಮತ್ತು ಚಾಮರಾಜನಗರದಿಂದ ಪುಟ್ಟರಂಗಶೆಟ್ಟಿ ಮುಂಚೂಣಿಯಲ್ಲಿದ್ದಾರೆ.
- ಬೆಂಗಳೂರು ಮತ್ತು ಕರಾವಳಿ-ಮಲೆನಾಡು: ರಾಜಧಾನಿ ಕೋಟಾದಲ್ಲಿ ಜಮೀರ್ ಅಹಮದ್, ರಿಜ್ವಾನ್ ಅರ್ಷದ್ ಅಥವಾ ಲಿಂಗಾಯತ ಸಮುದಾಯದ ಅಡಿ ಬಿ.ಕೆ.ಹರಿಪ್ರಸಾದ್/ಕೃಷ್ಣಪ್ಪ ಅವರ ಹೆಸರು ಚಲಾವಣೆಯಲ್ಲಿದೆ. ಚಿಕ್ಕಮಗಳೂರಿನಿಂದ ತರೀಕೆರೆ ಶ್ರೀನಿವಾಸ್ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಆರ್.ವಿ. ದೇಶಪಾಂಡೆ ಅಥವಾ ಮಂಕಾಳ ವೈದ್ಯ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಇನ್ನು, ಸಂಪುಟ ಸರ್ಜರಿಯ ಬೆನ್ನಲ್ಲೇ ಹೈಕಮಾಂಡ್ ಮತ್ತೊಂದು ಮಾಸ್ಟರ್ ಪ್ಲಾನ್ ರೂಪಿಸಿದೆ. ದೆಹಲಿ ಪ್ರವಾಸದ ಬೆನ್ನಲ್ಲೇ ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಒಟ್ಟಿಗೆ ಮನೆಗೆ ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಸಚಿವ ಸ್ಥಾನ ಸಿಗದ ಪ್ರಭಾವಿ ಶಾಸಕರು ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ತಕ್ಷಣವೇ ಈ ನಿಗಮ-ಮಂಡಳಿಗಳ ಉನ್ನತ ಜವಾಬ್ದಾರಿ ನೀಡಿ ಅಸಮಾಧಾನ ತಣ್ಣಗಾಗಿಸುವುದು ಕಾಂಗ್ರೆಸ್ ನಾಯಕರ ಪ್ರಮುಖ ತಂತ್ರಗಾರಿಕೆಯಾಗಿದೆ ಎಂದು ತಿಳಿದುಬಂದಿದೆ.
DK Shivakumar ಸಿಎಂ ಆಗಿ ಡಿ.ಕೆ. ಶಿವಕುಮಾರ್ 1 ತಿಂಗಳು ಕಂಪ್ಲೀಟ್: ಹೇಗಿದೆ ಗೊತ್ತಾ ಡಿಕೆಶಿ ರಿಪೋರ್ಟ್ ಕಾರ್ಡ್?