newsics. com | ನ್ಯೂಸಿಕ್ಸ್
ಮಹಿಳೆಯೊಬ್ಬರು ಭಾರತೀಯ ಪ್ರಜೆಯಾಗಿ ತನ್ನ ಅಂತಿಮ ದಿನಗಳನ್ನು ಕಳೆಯುವ ಉದ್ದೇಶದಿಂದ, ಎರಡು ದಶಕಗಳ ಹಿಂದೆ ಪಡೆದುಕೊಂಡಿದ್ದ ಅಮೆರಿಕದ ಪೌರತ್ವವನ್ನು ತ್ಯಜಿಸಿ ಭಾರತಕ್ಕೆ ಮರಳಿರುವ ವಿಶಿಷ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರದ ಬಾಪಟ್ಲಾ ಜಿಲ್ಲೆಯ ಚಿಂತಗುಂಪಲ ಗ್ರಾಮದವರಾದ ಕೊಂಡ್ರಗುಂಟ ಮಹಾಲಕ್ಷ್ಮಮ್ಮ ಎಂಬ ವೃದ್ಧೆಯು, ತಮ್ಮ ಪತಿಯ ಮರಣದ ನಂತರ 2000 ರಲ್ಲಿ ಅಮೆರಿಕಗೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಅವರಿಗೆ ಅಮೆರಿಕದಲ್ಲಿ ಪೌರತ್ವವೂ ಸಿಕ್ಕಿತ್ತು. ಇದೀಗ ಅವರಿಗೆ 94 ವರ್ಷವಾಗಿದೆ. ತಮ್ಮ ಜೀವನದ ಕೊನೆಯ ದಿನಗಳನ್ನು ಭಾರತೀಯ ಪ್ರಜೆಯಾಗಿ ತಮ್ಮ ತಾಯ್ನಾಡಿನಲ್ಲಿಯೇ ಕಳೆಯುವುದು ಅವರ ಏಕೈಕ ಆಸೆಯಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮಹಾಲಕ್ಷ್ಮಮ್ಮನವರು ಅಮೆರಿಕಗೆ ತೆರಳಿದ ಸಂದರ್ಭದಲ್ಲಿ ಇವರ ಮಗ ಬುಚಯ್ಯ ಚೌಧರಿ ವರ್ಜೀನಿಯಾದ ಪೀಟರ್ಸ್ಬರ್ಗ್ನಲ್ಲಿ ಆಂಕೊಲಾಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ 2018 ರಲ್ಲಿ ಬುಚಯ್ಯ ಚೌಧರಿ ಆಂಧ್ರಪ್ರದೇಶದ ಮಂಗಳಗಿರಿಯಲ್ಲಿರುವ ಎನ್ಆರ್ಐ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಭಾರತಕ್ಕೆ ಮರಳಿದ್ದರು.
ಮಹಾಲಕ್ಷ್ಮಮ್ಮ ಅವರಿಗೆ ತಮ್ಮ ಕೊನೆಯುಸಿರನ್ನು ಭಾರತದಲ್ಲಿಯೇ ಬಿಡಬೇಕೆಂಬ ಆಕಾಂಕ್ಷೆಯೊಂದಿಗೆ ಶೀಘ್ರವಾಗಿ ಭಾರತೀಯ ಪೌರತ್ವ ಪಡೆದುಕೊಳ್ಳಲು ಅಧಿಕಾರಿಗಳನ್ನು ಭೇಟಿಯಾಗಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಭಾರತೀಯ ಪೌರತ್ವ ನೀಡಲು ಮನವಿ ಮಾಡಿದ್ದಾರೆ.
ಬಾಪಟ್ಲಾದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿರುವ ಮಹಾಲಕ್ಷ್ಮಮ್ಮ, ‘ನನಗೆ 95 ವರ್ಷ ತುಂಬುತ್ತಿದೆ. ನನ್ನ ಕೊನೆಯ ದಿನಗಳನ್ನು ತಾಯ್ನಾಡಿನಲ್ಲಿ, ಭಾರತೀಯ ಪ್ರಜೆಯಾಗಿ ಕಳೆಯುವುದು ನನ್ನ ಏಕೈಕ ಆಸೆ. ನನ್ನ ದೇಹದ ಅಂತ್ಯಕ್ರಿಯೆ ಹುಟ್ಟೂರಿನಲ್ಲೇ ನಡೆಸಬೇಕೆಂದು ಬಯಸುತ್ತೇನೆ. ಈಗಾಗಲೇ ನಾನು ಅಮೆರಿಕದ ಪೌರತ್ವವನ್ನು ತ್ಯಜಿಸಿದ್ದೇನೆ. ದಯವಿಟ್ಟು ನನಗೆ ಆದಷ್ಟು ಬೇಗ ಭಾರತೀಯ ಪೌರತ್ವ ಪಡೆಯಲು ಅವಕಾಶ ಮಾಡಿಕೊಡಿ’ ಎಂದಿದ್ದಾರೆ.
ಭಾರತದ ಪೌರತ್ವ ದೊರೆತ ನಂತರ, ಕಾನೂನಿನ ಪ್ರಕಾರ ದೇಶದ ಸಾಂವಿಧಾನಿಕ ನಿಯಮಗಳಿಗೆ ಬದ್ಧವಾಗಿರುವುದಾಗಿ ಮಹಾಲಕ್ಷ್ಮಮ್ಮ ಹೇಳಿದ್ದಾರೆ. ‘ದೇಶದ ಪೌರತ್ವ ಪಡೆಯಲು ಇರುವ ನಿಯಮದಂತೆ ನಿಮಗೆ ಶೀಘ್ರವೇ ಪೌರತ್ವ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ಜೆ.ವೆಂಕಟ ಮುರಳಿ ಅವರು ಭರವಸೆ ನೀಡಿದ್ದಾರೆ.
ನಾನೇ ಸೀರೆ ಕತ್ತರಿಸಿ ವೈಶಾಕ್ ಮೃತದೇಹ ಕೆಳಗಿಳಿಸಿದ್ದೆ: ನಟಿ ಕೃಷಿ ತಾಪಂಡ ಹೇಳಿಕೆ
Actor Sharuk Khan ಮಂಗಳೂರಲ್ಲೇ ಇದ್ದಿದ್ರೆ ಶಿಕ್ಷಕನಾಗಿರ್ತಿದ್ದೆ: ಬಾಲಿವುಡ್ ನಟ ಶಾರುಕ್ ಖಾನ್, ವಿಡಿಯೋ ನೋಡಿ