newsics.com | ನ್ಯೂಸಿಕ್ಸ್
ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಆಪ್ತ ಸ್ನೇಹಿತ ವೈಶಾಖ್ ಸಾವನ್ನಪ್ಪಿರುವ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಘಟನೆ ನಡೆದ ದಿನವೇ ನಟಿ ಕೃಷಿ ತಾಪಂಡ ಅವರಿಂದ ಪೊಲೀಸರು ಅಧಿಕೃತ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಘಟನೆ ನಡೆದ ದಿನದ ಕುರಿತು ಪೊಲೀಸರ ಮುಂದೆ ವಿವರಣೆ ನೀಡಿದ ನಟಿ ಕೃಷಿ ತಾಪಂಡ, “ನಾನು ಕಳೆದ ಮೂರು ದಿನಗಳಿಂದ ಮನೆಯಲ್ಲಿ ಇರಲಿಲ್ಲ, ವೈಯಕ್ತಿಕ ಕಾರಣಗಳಿಗಾಗಿ ಕ್ಷೇಮವನಕ್ಕೆ ತೆರಳಿದ್ದೆ. ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ನಾನು ಮರಳಿ ಪ್ಲಾಟ್‌ಗೆ ಬಂದೆ. ಆ ಸಮಯದಲ್ಲಿ ಮನೆಯ ಮುಖ್ಯ ದ್ವಾರವು ಒಳಗಿನಿಂದ ಲಾಕ್ ಆಗಿತ್ತು. ನಮ್ಮ ಫ್ಲಾಟ್‌ಗೆ ಒಟ್ಟು ಎರಡು ಕೀಗಳಿದ್ದು, ಅದರಲ್ಲಿ ಒಂದು ಕೀ ನನ್ನ ಬಳಿ ಇದ್ದರೆ, ಮತ್ತೊಂದು ಕೀ ವೈಶಾಖ್ ಬಳಿ ಇರುತ್ತಿತ್ತು. ನನ್ನ ಬಳಿಯಿದ್ದ ಮತ್ತೊಂದು ಕೀಯನ್ನು ಬಳಸಿ ನಾನು ಬಾಗಿಲು ತೆರೆದು ಒಳಗೆ ಹೋದೆ” ಎಂದು ಕೃಷಿ ತಿಳಿಸಿದ್ದಾರೆ.
ನಾನು ಒಳಗೆ ಹೋಗಿ ನೋಡಿದಾಗ ವೈಶಾಖ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಗಾಬರಿಯಿಂದ ನಾನೇ ಸೀರೆಯನ್ನು ಕತ್ತರಿಸಿ, ಆತನ ಮೃತದೇಹವನ್ನು ಕೆಳಗೆ ಇಳಿಸಿದೆ. ನಂತರ ಪೊಲೀಸರಿಗೆ ಹಾಗೂ ವೈಶಾಖ್ ಕುಟುಂಬದವರಿಗೆ ವಿಷಯ ಮುಟ್ಟಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೇಳಿಕೆ ದಾಖಲಿಸಿಕೊಂಡ ಬೆನ್ನಲ್ಲೇ ಪೊಲೀಸರು ತನಿಖೆಯ ಭಾಗವಾಗಿ ನಟಿ ಕೃಷಿ ತಾಪಂಡ ಅವರ ಮೊಬೈಲ್ ಫೋನ್ ನ್ನು ವಶಕ್ಕೆ ಪಡೆದು ತೀವ್ರ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ನಡೆದಿದ್ದ ಸಂಭಾಷಣೆಗಳು, ಫೋನ್ ಕರೆಗಳ ಪಟ್ಟಿ (Call list) ಹಾಗೂ ವಾಟ್ಸಾಪ್ ಚಾಟ್‌ಗಳನ್ನು (WhatsApp Chats) ತಪಾಸಣೆ ನಡೆಸಿದರು. ಆದರೆ, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಸಂದೇಶಗಳು ಅಥವಾ ಜಗಳ ನಡೆದಿರುವ ಕುರುಹುಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ನಟಿಯ ಹೇಳಿಕೆಯನ್ನು ಪೂರ್ಣಗೊಳಿಸಿ, ಅವರ ಮೊಬೈಲ್ ಫೋನ್ ನ್ನು ವಾಪಸ್ ನೀಡಿದ್ದಾರೆ.
ಇತ್ತ ವೈಶಾಖ್ ನಿಧನದಿಂದ ಆಘಾತಕ್ಕೊಳಗಾಗಿರುವ ಅವರ ಕುಟುಂಬ ಸದಸ್ಯರನ್ನೂ ಪೊಲೀಸರು ಸಂಪರ್ಕಿಸಿ ಹೇಳಿಕೆ ಪಡೆದಿದ್ದಾರೆ. ಪೊಲೀಸರಿಗೆ ನೀಡಿರುವ ಪ್ರಾಥಮಿಕ ಮಾಹಿತಿಯಲ್ಲಿ ಕುಟುಂಬಸ್ಥರು ಯಾವುದೇ ನಟಿಯ ಮೇಲಾಗಲಿ ಅಥವಾ ಇತರರ ಮೇಲಾಗಲಿ ಆರೋಪ ಮಾಡಿಲ್ಲ. “ನಮಗೆ ಈ ಪ್ರಕರಣದಲ್ಲಿ ಯಾವುದೇ ರೀತಿಯ ಅನುಮಾನಗಳಿಲ್ಲ. ಈ ಹಿಂದೆಯೇ ನಾವು ವೈಶಾಖ್‌ನನ್ನು ಮನೆಗೆ ವಾಪಸ್ ಬರುವಂತೆ ಕರೆದಿದ್ದೆವು. ನಮಗೇನು ಆತನ ನಡೆಗೆ ತಕರಾರು ಇರಲಿಲ್ಲ. ಆದರೆ ಆತ ಬರಲು ಸಿದ್ಧನಿರಲಿಲ್ಲ. ನಾವು ಕೂಡ ಈ ವಿಚಾರದಲ್ಲಿ ಆತನಿಗೆ ಅತಿಯಾಗಿ ಒತ್ತಾಯ ಮಾಡದೆ ಸುಮ್ಮನಾಗಿದ್ದೆವು. ಈಗ ಆತ ಇಂತಹ ನಿರ್ಧಾರ ಕೈಗೊಂಡಿರುವುದು ನಮಗೆ ತೀವ್ರ ದುಃಖ ತಂದಿದೆ,” ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಯಾರ ಮೇಲೂ ಆರೋಪ ಮಾಡದೇ ಕುಟುಂಬದವರು ದೂರು ನೀಡಿದ್ದು, ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
Actor Sharuk Khan ಮಂಗಳೂರಲ್ಲೇ ಇದ್ದಿದ್ರೆ ಶಿಕ್ಷಕನಾಗಿರ್ತಿದ್ದೆ: ಬಾಲಿವುಡ್ ನಟ ಶಾರುಕ್ ಖಾನ್, ವಿಡಿಯೋ ನೋಡಿ