newsics.com/ನ್ಯೂಸಿಕ್ಸ್
ಜನಪ್ರಿಯ ಬಹುಭಾಷಾ ನಟ ಹಾಗೂ ಗೋರಖ್‌ಪುರ ಸಂಸದ ರವಿ ಕಿಶನ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಯೋಗ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗಿದೆ. ಗೋರಖ್‌ಪುರದಲ್ಲಿ ನಡೆದ ಯೋಗ ಕಾರ್ಯಕ್ರಮವೊಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.
ಯೋಗಾಸನಗಳನ್ನು ಮಾಡುವಾಗ ನಟ ರವಿ ಕಿಶನ್ ಅವರು ಏನನ್ನೋ ಅಗಿಯುತ್ತಿರುವಂತೆ ಕಂಡುಬಂದಿದ್ದರಿಂದ, ಅದು ಗುಟ್ಕಾ ಇರಬಹುದು ಎಂದು ನೆಟ್ಟಿಗರು ಊಹಿಸಿದ್ದಾರೆ. ಅದನ್ನೇ ಈಗ ಸಾಮಾಜಿಕ ಜಾಲತಾಣ ಬಳಕೆದಾರರು ‘ಗುಟ್ಖಾಸನ’ ಎಂದು ಕರೆದು ತಮಾಷೆ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಂತೆಯೇ, ಬಳಕೆದಾರರು ಯೋಗಾಸನ ಮಾಡುವಾಗ ರವಿ ಕಿಶನ್ ಅವರು ನೀಡಿದ ಹಾವಭಾವಗಳ ಕುರಿತು ತಮ್ಮದೇ ಆದ ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಈ ಕಾರ್ಯಕ್ರಮದ ಗಂಭೀರತೆಯನ್ನು ಪ್ರಶ್ನಿಸಿದರೆ, ಇನ್ನು ಕೆಲವರು ತಮಾಷೆಯ ಕಾಮೆಂಟ್‌ಗಳ ಮೂಲಕ ಸಖತ್ ಆಗಿಯೇ ಕಾಲೆಳೆಯುತ್ತಿದ್ದಾರೆ.
ಕೇಳಿಬಂದ ಚಿತ್ರ-ವಿಚಿತ್ರ ಕಾಮೆಂಟ್‌ಗಳು
“ಇದು ಯಾರಿಗಾಗಿ ಮಾಡುತ್ತಿರುವ ಯೋಗ? ಹೇಗಿದ್ದರೂ ಅವರು ನಟರು, ಇಲ್ಲೂ ಸಹ ಕೇವಲ ನಟನೆ ಮಾಡುತ್ತಿದ್ದಾರೆ. ರೀಲ್ಸ್ ಮತ್ತು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಅದರ ನಂತರ ಅವರು ಯೋಗ ಮಾಡಿದರೋ ಇಲ್ಲವೋ ಯಾರಿಗೆ ಗೊತ್ತು?” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಇದು ಫೇಸ್ ಯೋಗ (ಮುಖದ ಯೋಗ).. ತಮ್ಮ ವಸಡುಗಳನ್ನು ಹಿಗ್ಗಿಸಲು ಮತ್ತು ವಿಶ್ರಾಂತಿ ನೀಡಲು ಗುಟ್ಖಾ ಅಗಿಯುತ್ತಿದ್ದಾರೆ” ಎಂದು ಕಾಲೆಳೆದಿದ್ದಾರೆ.
ಮೊಡವೆ, ತಲೆನೋವಿಗೆ ಇದೇ ರಾಮಬಾಣ!; ಇದನ್ನು ಬಳಸುವುದರಿಂದಾಗುವ ಪ್ರಯೋಜನಗಳೇನು?