newsics.com / ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ವಿಧಾನಪರಿಷತ್ತಿನ ಏಳು ಸ್ಥಾನಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.
ಕಣದಲ್ಲಿದ್ದ ಎಂಟು ಅಭ್ಯರ್ಥಿಗಳ ಪೈಕಿ ಏಳು ಮಂದಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಕಣಕ್ಕಿಳಿಸಿದ್ದ ಐದೂ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಪರವಾಗಿ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳಲ್ಲಿ ಇಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ಅಗತ್ಯ ಮತಗಳು ಲಭಿಸದ ಹಿನ್ನೆಲೆ ಸೋಲು ಎದುರಾಗಿದೆ. ಇದರೊಂದಿಗೆ ಮೈತ್ರಿಕೂಟಕ್ಕೆ ರಾಜಕೀಯವಾಗಿ ಮುಖಭಂಗ ಉಂಟಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ. ಮೋಹನ್, ಶಿವಣ್ಣ ಮಳವಳ್ಳಿ ಹಾಗೂ ವಿನಯ್ ಕಾರ್ತಿಕ್ ಅವರು ಗೆಲುವು ಸಾಧಿಸಿದ್ದಾರೆ. ವಿಶೇಷವಾಗಿ ಐದನೇ ಅಭ್ಯರ್ಥಿಯಾಗಿದ್ದ ವಿನಯ್ ಕಾರ್ತಿಕ್ ಅವರ ಗೆಲುವು ಅಂತಿಮ ಹಂತದವರೆಗೂ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಮೈತ್ರಿಕೂಟದ ಅಭ್ಯರ್ಥಿಗಳಾದ ಲಿಂಗರಾಜ ಪಾಟೀಲ್ ಮತ್ತು ರಘು ಕೌಟಿಲ್ಯ ಜಯಗಳಿಸಿದ್ದು, ಜೆಡಿಎಸ್‌ನ ಗೋವಿಂದರಾಜು ಸೋಲಿನ ಕಹಿ ಅನುಭವಿಸಿದ್ದಾರೆ.
ಈ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದ ಉಪಮುಖ್ಯಮಂತ್ರಿ D. K. Shivakumar ಅವರು ಆರಂಭದಿಂದಲೇ ಕಟ್ಟುನಿಟ್ಟಿನ ತಂತ್ರ ರೂಪಿಸಿದ್ದರು. ಕಾಂಗ್ರೆಸ್ ಶಾಸಕರಲ್ಲಿ ಯಾವುದೇ ಅಡ್ಡಮತದಾನ ನಡೆಯದಂತೆ ಎಲ್ಲರನ್ನು ಬಿಡದಿಯ ರೆಸಾರ್ಟ್‌ನಲ್ಲಿ ಒಟ್ಟಿಗೆ ಇರಿಸಿ ನಿಗಾ ವಹಿಸಲಾಗಿತ್ತು.
ಐದು ಅಭ್ಯರ್ಥಿಗಳ ಗೆಲುವು ಖಚಿತಪಡಿಸಲು ಶಾಸಕರನ್ನು ಐದು ಪ್ರತ್ಯೇಕ ತಂಡಗಳಾಗಿ ವಿಭಜಿಸಿ ಜವಾಬ್ದಾರಿ ಹಂಚಲಾಗಿತ್ತು. ಮತದಾನದ ದಿನವೂ ತಂಡವಾರು ಶಾಸಕರನ್ನು ಪ್ರತ್ಯೇಕ ಬಸ್‌ಗಳಲ್ಲಿ ವಿಧಾನಸೌಧಕ್ಕೆ ಕರೆತಂದು ಮತ ಚಲಾಯಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.
ವಿರೋಧ ಪಕ್ಷಗಳ ಅಡ್ಡಮತದಾನದ ನಿರೀಕ್ಷೆ ವಿಫಲವಾಗಿದ್ದು, ಕಾಂಗ್ರೆಸ್ ತನ್ನ ಮತಬಲವನ್ನು ಅಚ್ಚುಕಟ್ಟಾಗಿ ಕಾಯ್ದುಕೊಂಡಿದೆ. ಡಿ.ಕೆ. ಶಿವಕುಮಾರ್ ರೂಪಿಸಿದ ತಂತ್ರ ನೂರಕ್ಕೆ ನೂರು ಫಲಿಸಿದೆ.
ಟೆಲಿಗ್ರಾಂ ಉಗ್ರವಾದ, ಸೈಬರ್ ಅಪರಾಧಗಳಿಗೆ ಅಡ್ಡೆ; ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಗಂಭೀರ ಮಾಹಿತಿ