newsics.com / ನ್ಯೂಸಿಕ್ಸ್
ನವದೆಹಲಿ: ಆರ್‌ಎಸ್‌ಎಸ್(RSS) ಸಂಘಟನೆಯ ನೋಂದಣಿ ಸಂಬಂಧ ದಾಖಲೆ ಕೇಳಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್(RSS Chief Mohan Bhagwat) ಅವರಿಗೆ ಪತ್ರ ಬರೆದಿದ್ದೇನೆ. ನಾನು ಪ್ರಿಯಾಂಕ್ ಖರ್ಗೆ(Priyank kharge)ಯಾಗಿ ಈ ಪತ್ರ ಬರೆದಿಲ್ಲ.
ಸರ್ಕಾರದ ಪರವಾಗಿ ಪತ್ರ ಬರೆದಿದ್ದೇನೆ. ನಮ್ಮ ಪತ್ರಕ್ಕೆ ಅವರು ಉತ್ತರ ಕೊಡುತ್ತಾರೆ ಎಂದು ನಂಬಿದ್ದೇನೆ. ಅವರು ಪ್ರತಿಕ್ರಿಯೆ ನೀಡದಿದ್ದರೆ ಮುಂದೆ ನೋಡೋಣ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅವರ ಆಚರಣೆಗೆ ನಾವು ಅಡ್ಡಿಪಡಿಸಲ್ಲ. ಆದರೆ, ಏನೇ ಮಾಡುವುದಿದ್ದರೂ ಕಾನೂನಿನಡಿ ಮಾಡಿ ಎಂದು ಕೇಳಿದ್ದೇನೆ ಅಷ್ಟೆ. ಕರ್ನಾಟಕದಲ್ಲಿ ಯಾವುದೇ ಧರ್ಮದ ಸಂಘ-ಸಂಸ್ಥೆ ಕಾನೂನಿನಡಿ ಬರಬೇಕು. ಯಾವ ಕಾನೂನಿನಡಿ ಸಂಘ ಅಸ್ತಿತ್ವದಲ್ಲಿದೆ ಎನ್ನುವುದನ್ನು ಹೇಳಬೇಕು. ನಿಮ್ಮ ಸಂಘಟನೆಯ ನೋಂದಣಿ ಎಲ್ಲಿದೆ?; ನಿಮ್ಮ ಸಂಘಟಕರು ಯಾರು?; ನಿಮ್ಮ ಸಂಸ್ಥೆಯ ಮುಖ್ಯಸ್ಥರು ಯಾರು? ಎಂದು ಪತ್ರದಲ್ಲಿ ಕೇಳಿದ್ದೇನೆ. ನಾನು ಧರ್ಮದ ಬಗ್ಗೆ ನೋಂದಣಿ ಕೇಳಿಲ್ಲ. ನಿಮ್ಮ ಸಂಸ್ಥೆಯ ನೋಂದಣಿ ಬಗ್ಗೆ ಪ್ರಶ್ನಿಸಿದ್ದೇನೆ. ಯಾವುದಕ್ಕೂ ಉಡಾಫೆ ಉತ್ತರ ಕೊಡಬೇಡಿ ಎಂದರು.
ನನ್ನ ಪ್ರಶ್ನೆಗೆ ಉತ್ತರ ನೀಡೋದಾದ್ರೆ ನಾನು ಆರೆಸ್ಸೆಸ್ ಕಚೇರಿಗೆ ಹೋಗಲು ಸಿದ್ಧ
ನಾನು ಕೇಳಿರುವ ಪ್ರಶ್ನೆಗಳಲ್ಲಿ ಯಾವುದು ಸರಿ ಇಲ್ಲ ಎಂಬುದನ್ನು ಹೇಳಿ. ಮೋಹನ್ ಭಾಗವತ್ ಅವರು ನನ್ನ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಅವರ ಹೇಳಿಕೆ ಹಳೆಯದು. ನಾನು ಪತ್ರ ಬರೆದಿರುವುದು 15ನೇ ತಾರೀಕಿಗೆ. ಅವರು ಹೇಳಿಕೆ ಕೊಟ್ಟಿರುವುದು 13ನೇ ತಾರೀಕಿಗೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅವರು ನನ್ನ ಪತ್ರಕ್ಕೆ ಉತ್ತರ ಕೊಡುತ್ತಾರೆ ಎಂದು ನಂಬಿದ್ದೇನೆ. ಕೊಡದಿದ್ದರೆ ಮುಂದೆ ನೋಡೋಣ. ನನ್ನ ಪ್ರಶ್ನೆಗಳಿಗೆ ಉತ್ತರ ನೀಡುವುದಾದರೆ ನಾನು ಆರ್‌ಎಸ್‌ಎಸ್ ಕಚೇರಿಗೆ ಹೋಗಲು ಸಿದ್ಧ. ನಾನು ನಮ್ಮ ವಕೀಲರ ಜೊತೆಗೆ ಹೋಗ್ತಿನಿ. ಅವರು ಅವರ ವಕೀಲರ ಜೊತೆಗೆ ಬರಲಿ ಎಂದು ಹೇಳಿದರು.
ಪಾರದರ್ಶಕತೆ ಕೇಳೋದು ತಪ್ಪಾ?. ಪಾರದರ್ಶಕತೆ ಬಗ್ಗೆ ಕೇಳಿದರೆ ಧರ್ಮವನ್ನೇಕೆ ಅಡ್ಡ ತರುತ್ತೀರಿ. ದೇಣಿಗೆ ಬಗ್ಗೆ ಮಾಹಿತಿ ಕೊಡಬೇಕಲ್ವಾ?. ಅಯೋಧ್ಯೆಯ ದೇಣಿಗೆ ವಿಚಾರದಲ್ಲಿ ದೊಡ್ಡ ಗೊಂದಲ ಆಗಿದೆ. ರಾಮನೇ ಉತ್ತರ ನೀಡುವ ಸಂದರ್ಭ ಎದುರಾಗಿದೆ. ಹೀಗಿರುವಾಗ ಶ್ರೀರಾಮನ ಹೆಸರಲ್ಲಿ ಪಥ ಸಂಚಲನ ಮಾಡುವವರು ಲೆಕ್ಕ ಕೊಡಬಾರದಾ?. ತೆರಿಗೆದಾರರ ಹಣದಿಂದ ಮೋಹನ್ ಭಾಗವತ್‌ಗೆ ಭದ್ರತೆ ಕೊಡಲಾಗುತ್ತಿದೆ. ಇದರ ಅಕೌಂಟೆಬಿಲಿಟಿ ಇರಬೇಕಾ?, ಬೇಡ್ವಾ?. ನಮ್ಮ ಸಿಬ್ಬಂದಿ ನಿಮ್ಮ ಪಥಸಂಚಲನ ಕಾಯುತ್ತಾರಲ್ಲ, ಅದು ತೆರಿಗೆದಾರರ ದುಡ್ಡು. ಆಳು ಮಕ್ಕಳನ್ನು (ಬಿಜೆಪಿ) ಮಾತಾಡಲು ಬಿಡಬೇಡಿ. ನೀವು ದಾಖಲೆ ಕೊಡಿ ಅಷ್ಟೆ ಎಂದರು.
ಪಾಕ್ ಜತೆ ನಂಟಿನ ಬಗ್ಗೆ ಮಾತಾಡ್ತಿರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸ್ತಿರಿ. ಹಾಗಿದ್ದರೆ, ಸಂಘಟನೆ ಪೊಲಿಟಿಕಲ್ ಅಲ್ಲ ಅಂತೀರಾ?. ಅಮೆರಿಕದಲ್ಲಿ ಡಿಪಾರ್ಟ್ಮೆಂಟ್ ಲಾ, ಈ ಸಂಸ್ಥೆ ಸರಿ ಇಲ್ಲ ಎಂದು ವರದಿ ಕೊಟ್ಟಿದೆ. ಅದನ್ನು ಸರಿಪಡಿಸಲು ಒಂದು ಲಾ ಫಾಮ್೯ ಗೆ ಮೂರು ಕೋಟಿ ರುಪಾಯಿ ಕೊಟ್ಟಿದ್ದಾರೆ. ಎಲ್ಲಿಂದ ಬಂತು ದುಡ್ಡು ಇವರಿಗೆ ಎಂದವರು ಪ್ರಶ್ನಿಸಿದರು.
ಕಾನೂನುಬದ್ಧ ಸ್ಥಾನಮಾನ ಸ್ಪಷ್ಟಪಡಿಸಿ:
ಸಂಘ ತನ್ನ ಅಸ್ತಿತ್ವದ ಶತಮಾನೋತ್ಸವದ (100 ವರ್ಷ) ಸಂದರ್ಭದಲ್ಲಾದರೂ ತನ್ನ ಕಾನೂನುಬದ್ಧ ಸ್ಥಾನಮಾನವನ್ನು ಸ್ಪಷ್ಟಪಡಿಸಬೇಕು. ಆರ್ಥಿಕ ಪಾರದರ್ಶಕತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿ ಪ್ರಕಾರ ಕರ್ನಾಟಕವೊಂದರಲ್ಲೇ 4,127 ದೈನಂದಿನ ಶಾಖೆಗಳು, 1,389 ವಾರಾಂತ್ಯದ ಸಭೆಗಳು, 60 ಮಾಸಿಕ ಮಂಡಳಿಗಳು ನಡೆಯುತ್ತಿವೆ. ಜೊತೆಗೆ 500ಕ್ಕೂ ಹೆಚ್ಚು ಪಥಸಂಚಲನಗಳು ಹಾಗೂ ಲಕ್ಷಾಂತರ ಜನರು ಭಾಗವಹಿಸುವ ಸಮಾಜೋತ್ಸವಗಳು ನಿರಂತರವಾಗಿ ಜರುಗುತ್ತಿವೆ. ಇಷ್ಟು ದೊಡ್ಡಮಟ್ಟದ ಸಾರ್ವಜನಿಕ ಸಜ್ಜುಗೊಳಿಸುವಿಕೆ ಹಾಗೂ ಗಣವೇಷಧಾರಿ ಪಥಸಂಚಲನಗಳನ್ನು ‘ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅನುಮತಿಗಳ ವಿವರಗಳನ್ನು ಒದಗಿಸಬೇಕು. ಪ್ರತಿಯೊಂದು ಸಂಸ್ಥೆಯೂ ಕಾನೂನಿನ ಚೌಕಟ್ಟಿಗೆ ಬದ್ಧವಾಗಿರಬೇಕು ಎಂದರು.
ಸಾಮಾನ್ಯ ನಾಗರಿಕರು, ಕಾರ್ಮಿಕ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಟ್ರಸ್ಟ್‌ಗಳು ಮತ್ತು ಕಂಪನಿಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ನೋಂದಣಿ ಮಾಡಿಕೊಂಡು, ತಮ್ಮ ಆದಾಯ-ವೆಚ್ಚಗಳ ವಿವರಗಳನ್ನು ನೀಡುತ್ತಿರುವಾಗ ಆರ್‌ಎಸ್‌ಎಸ್‌ಗೆ ಮಾತ್ರ ಇದರಿಂದ ವಿನಾಯಿತಿ ಏಕೆ ಎಂದವರು ಪ್ರಶ್ನಿಸಿದರು.
ಸಂಘಟನೆ ತನ್ನ 100ನೇ ವರ್ಷದಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು, ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುವುದೇ ದೇಶಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಸಚಿವರು ಹೇಳಿದರು.
https://www.newsics.com/2026/06/17/you-can-earn-%e2%82%b9250-per-hour-while-doing-housework-try-this-trick/