newsics.com/ನ್ಯೂಸಿಕ್ಸ್
ಉಡುಪಿ: ತೆಂಗಿನ ಮರದಿಂದ ಬಿದ್ದ ತೆಂಗಿನಕಾಯಿ ತಲೆಗೆ ಬಡಿದು ಒಂದೂವರೆ ವರ್ಷದ ಬಾಲಕ ದಕ್ಷ್ ಪೂಜಾರಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ನಡೆದಿದೆ.
ಮೃತ ಬಾಲಕ ದಕ್ಷ್, ಹೆರಂಜೆಯ ಪ್ರಶಾಂತ್ ಪೂಜಾರಿ ಹಾಗೂ ಸುಚಿತ್ರ ಪೂಜಾರಿ ದಂಪತಿಯ ಪುತ್ರನಾಗಿದ್ದ. ಮಂಗಳವಾರ ಬೆಳಿಗ್ಗೆ ಸುಮಾರು 8:15ರ ವೇಳೆಗೆ ಸುಚಿತ್ರ ಅವರು ತಮ್ಮ ಪುತ್ರಿ ದಿಯಾಳನ್ನು ಶಾಲಾ ಬಸ್ಸಿಗೆ ಹತ್ತಿಸಲು ಮಗ ದಕ್ಷ್‌ನನ್ನು ಎತ್ತಿಕೊಂಡು ಮನೆಯಿಂದ ಹೊರಟಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ತೆಂಗಿನಕಾಯಿ ಅಚಾನಕ್ ಕೆಳಗೆ ಬಿದ್ದು ಬಾಲಕನ ತಲೆಗೆ ಬಡಿದಿದೆ.
ಗಂಭೀರವಾಗಿ ಗಾಯಗೊಂಡಿದ್ದ ದಕ್ಷ್‌ನನ್ನು ತಕ್ಷಣವೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರೂ, ಮೆದುಳಿಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ.
ಪ್ರಶಾಂತ್ ಪೂಜಾರಿ ಅವರು ಕಳೆದ ಹಲವು ವರ್ಷಗಳಿಂದ ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದು, ಕುಟುಂಬವನ್ನು ಅದರಿಂದಲೇ ನಿರ್ವಹಿಸುತ್ತಿದ್ದರು. ಏಕೈಕ ಪುತ್ರನ ಅಕಾಲಿಕ ನಿಧನದಿಂದ ಕುಟುಂಬದವರ ದುಃಖ ಮುಗಿಲುಮುಟ್ಟಿದ್ದು, ಗ್ರಾಮಸ್ಥರು ಹಾಗೂ ಬಂಧುಬಳಗ ಕಂಬನಿ ಮಿಡಿದಿದ್ದಾರೆ.
ತಿಪಟೂರು ಶಾಸಕ ಕೆ. ಷಡಕ್ಷರಿ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಗಂಭೀರ