newsics.com/ನ್ಯೂಸಿಕ್ಸ್
ಬೆಂಗಳೂರು: ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಚಿವ ಯುಟಿ ಖಾದರ್ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಶಕಗಳಿಂದ ಕಾಡುತ್ತಿರುವ ವೈದ್ಯರ ಕೊರತೆ ನೀಗಿಸಲು ಸಚಿವರು ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲೇ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸಿದ್ದಾರೆ.
ರಾಜ್ಯದ ವಿವಿಧ ಕಡೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಮೊದಲ ಹಂತವಾಗಿ 200 ವೈದ್ಯರನ್ನು ಖಾಯಂ ಹಾಗೂ ನೇರ ನೇಮಕಾತಿ ಮಾಡಿಕೊಳ್ಳಲು ಇಲಾಖೆ ನಿರ್ಧರಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಪರೀಕ್ಷೆ ಮುಗಿದ ಕೇವಲ ಒಂದು ವಾರದ ಒಳಗಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ನಿರ್ಧಾರ ಮಾಡಲಾಗಿದೆ. ಈ 200 ವೈದ್ಯರ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಈಗಾಗಲೇ ಅಧಿಕೃತ ಅನುಮೋದನೆ ಕೂಡ ದೊರೆತಿದೆ.
ಸದ್ಯ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 1,280 ವೈದ್ಯರ ಕೊರತೆಯಿದೆ ಎಂದು ಅಂದಾಜಿಸಲಾಗಿದೆ. ವೈದ್ಯರ ಜೊತೆಗೆ ಆಸ್ಪತ್ರೆಗಳ ಸುಗಮ ನಿರ್ವಹಣೆಗೆ ಅಗತ್ಯವಿರುವ ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಮುಂದಾಗಿದೆ. ಇದರ ಭಾಗವಾಗಿ 400 ನರ್ಸ್‌ಗಳು, 400 ಫಾರ್ಮಸಿಸ್ಟ್‌ಗಳು ಹಾಗೂ 400 ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕವೇ ಖಾಯಂ ಆಗಿ ಭರ್ತಿ ಮಾಡಿಕೊಳ್ಳಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ತುರ್ತು ಅಗತ್ಯತೆಗಳನ್ನು ಪೂರೈಸಲು ತಕ್ಷಣವೇ ಜಾರಿಗೆ ಬರುವಂತೆ ಗುತ್ತಿಗೆ ಆಧಾರದ ಮೇಲೆ 1,000 ವೈದ್ಯರನ್ನು ನೇಮಕ ಮಾಡಿಕೊಳ್ಳಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ಬದಲಾಗಿ ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತ ವೈದ್ಯರು ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನೇರವಾಗಿ ಅರ್ಜಿ ಸಲ್ಲಿಸಿ, ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಸಂಗಾತಿ ಜತೆ ಜಗಳವಾಡಿತಾ ಗೊರಿಲ್ಲಾ? ಪಾಥೋ ಮೂಡ್‌ನ ವೈರಲ್ ವಿಡಿಯೋ ನೋಡಿ