newsics.com/ನ್ಯೂಸಿಕ್ಸ್
ಬೆಳ್ಳುಳ್ಳಿ ಅಡುಗೆ ಮನೆಯಲ್ಲಿ ಬಳಸುವ ಪ್ರಮುಖ ಪದಾರ್ಥ. ಬೆಳ್ಳುಳ್ಳಿ ಇಲ್ಲದ ಭಾರತೀಯ ಅಡುಗೆಮನೆಯನ್ನು ನೋಡಲು ಸಾಧ್ಯವಿಲ್ಲ. ಇದು ನಮ್ಮ ಸಾಂಪ್ರದಾಯಿಕ ಔಷಧದಲ್ಲಿ ಮತ್ತು ಆಧುನಿಕ ಸಂಶೋಧನೆಯಲ್ಲಿ ಅತ್ಯಗತ್ಯ ಆಹಾರ ಪದಾರ್ಥ ಮತ್ತು ಶಕ್ತಿಯುತ ಔಷಧಿಯಾಗಿ ಗುರುತಿಸಲ್ಪಟ್ಟಿದೆ.
ಬೆಳ್ಳುಳ್ಳಿಯ ವಿಶಿಷ್ಟವಾದ ವಾಸನೆ, ಖಾರದ ರುಚಿಯನ್ನು ಮೀರಿ, ಅದರಲ್ಲಿ ಅಸಂಖ್ಯಾತ ಔಷಧೀಯ ಗುಣಗಳು ಅಡಗಿವೆ. ಇದು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಿಂದ ಲಾಭ ನೀಡುವುದು. ಇದರಲ್ಲಿ ಹಲವಾರು ಖನಿಜಾಂಶಗಳು, ವಿಟಮಿನ್ ಗಳು ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುವಂತಹ ಗುಣಗಳು ಇವೆ. ನೀವು ಬೆಳ್ಳುಳ್ಳಿಯನ್ನು ಯಾವ ರೀತಿ ಸೇವಿಸುತ್ತೀರಿ ಎನ್ನುವುದರ ಮೇಲೆ ಜೀವನವು ಬದಲಾಗಬಹುದು. ತುಂಬಾ ಘಾಟು ಹೊಂದಿರುವಂತಹ ಹಸಿ ಬೆಳ್ಳುಳ್ಳಿ ಸೇವನೆ ಮಾಡಿದರೆ ಅದರಿಂದ ಖಿನ್ನತೆ ದೂರ ಮಾಡಬಹುದು ಮತ್ತು ರಕ್ತವನ್ನು ಶುದ್ಧೀಕರಿಸಬಹುದು. ಹಸಿ ಬೆಳ್ಳುಳ್ಳಿಯಿಂದ ಸಿಗುವ ಲಾಭಗಳ ಬಗ್ಗೆ ತಿಳಿಯುವ.
ಬೆಳ್ಳುಳ್ಳಿಯಲ್ಲಿ ಅಲಿಸಿನ್ (Allicin) ಎಂಬ ಸಕ್ರಿಯ ಸಂಯುಕ್ತವಿದ್ದು, ಇದು ಆಂಟಿ-ಆಕ್ಸಿಡೆಂಟ್, ಆಂಟಿ-ಬ್ಯಾಕ್ಟೀರಿಯಲ್ ಹಾಗೂ ಆಂಟಿ-ಇನ್ಫ್ಲಮೇಟರಿ ಗುಣಗಳನ್ನ ಹೊಂದಿದೆ. ಬೆಳ್ಳುಳ್ಳಿಯನ್ನ ಜಗಿದು ಅಥವಾ ಪುಡಿಮಾಡಿದಾಗ ಅಲಿಸಿನ್ ಉತ್ಪತ್ತಿಯಾಗುತ್ತದೆ.
ಈ ಸಂಯುಕ್ತವು ದೇಹದ ರೋಗನಿರೋಧಕ ಶಕ್ತಿಯನ್ನ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಬಹುದು. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುವ ಪ್ರೀಬಯೋಟಿಕ್ ಗುಣಗಳನ್ನ ಹೊಂದಿದ್ದು, ಜೀರ್ಣಾಂಗದ ಆರೋಗ್ಯವನ್ನ ಕಾಪಾಡಲು ಸಹಾಯ ಮಾಡುತ್ತದೆ. ಜೊತೆಗೆ ಆಹಾರದಲ್ಲಿರುವ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನ ಹೆಚ್ಚಿಸಬಹುದು.
ಹೃದಯದ ಆರೋಗ್ಯಕ್ಕೂ ಬೆಳ್ಳುಳ್ಳಿ ಪ್ರಯೋಜನಕಾರಿ ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಬೆಳ್ಳುಳ್ಳಿಯಲ್ಲಿರುವ ಸಂಯುಕ್ತಗಳು ರಕ್ತನಾಳಗಳ ಕಾರ್ಯಕ್ಷಮತೆಯನ್ನ ಬೆಂಬಲಿಸಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನೆರವಾಗಬಹುದು.
ಹೀಗಾಗಿ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನ ಕಡಿಮೆ ಮಾಡುವಲ್ಲಿ ಇದು ಸಹಕಾರಿ ಎನ್ನಲಾಗುತ್ತಿದೆ. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವ ನೈಸರ್ಗಿಕ ಆಹಾರಗಳಲ್ಲಿ ಬೆಳ್ಳುಳ್ಳಿಯೂ ಒಂದಾಗಿದೆ. ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸುವುದರಿಂದ ಸೋಂಕುಗಳ ವಿರುದ್ಧ ದೇಹದ ಪ್ರತಿರೋಧ ಸಾಮರ್ಥ್ಯ ಹೆಚ್ಚಾಗಬಹುದು. ಶೀತ, ಕೆಮ್ಮು ಮತ್ತು ಋತುಮಾನ ಬದಲಾವಣೆಯಿಂದ ಉಂಟಾಗುವ ಸಾಮಾನ್ಯ ಆರೋಗ್ಯ ಸಮಸ್ಯೆಗಳ ವಿರುದ್ಧವೂ ಇದು ನೆರವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇತ್ತೀಚಿನ ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಸಮತೋಲನದಲ್ಲಿಡಲು ಸಹ ಸಹಾಯ ಮಾಡಬಹುದು. ಮಧುಮೇಹದ ಅಪಾಯವನ್ನ ಕಡಿಮೆ ಮಾಡುವಲ್ಲಿ ಹಾಗೂ ಮೆಟಾಬಾಲಿಸಂ ಸುಧಾರಿಸುವಲ್ಲಿ ಇದರ ಪಾತ್ರದ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಕೆಲವು ವರದಿಗಳು ತೂಕ ನಿಯಂತ್ರಣಕ್ಕೂ ಬೆಳ್ಳುಳ್ಳಿ ನೆರವಾಗಬಹುದು ಎಂದು ಸೂಚಿಸಿವೆ. ಆದರೆ ಬೆಳ್ಳುಳ್ಳಿಯನ್ನ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಕೆಲವರಿಗೆ ಹೊಟ್ಟೆ ಉರಿ, ಗ್ಯಾಸ್ಟ್ರಿಕ್, ವಾಕರಿಕೆ, ಅಜೀರ್ಣ ಅಥವಾ ಬಾಯಿಯ ದುರ್ವಾಸನೆ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ರಕ್ತ ತೆಳುವಾಗಿಸುವ ಔಷಧಿಗಳನ್ನ ಸೇವಿಸುತ್ತಿರುವವರು ಅಥವಾ ಜೀರ್ಣಾಂಗದ ಸಮಸ್ಯೆಗಳಿರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸುವುದು ಉತ್ತಮವೆಂದು ತಜ್ಞರು ಸೂಚಿಸಿದ್ದಾರೆ.
Vegetable Prices Rise ಜನಸಾಮಾನ್ಯರ ಜೇಬಿಗೆ ಕತ್ತರಿ : ಟೊಮೆಟೋ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ