newsics.com/ನ್ಯೂಸಿಕ್ಸ್
ಶಿವಾನಂದ ನೀಲಣ್ಣವರ ಅವರು ಬೆಳಗಾವಿ ಮೂಲದ ಉದ್ಯಮಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಸುದ್ದಿಯಲ್ಲಿದ್ದಾರೆ.
ಮೇ 14 ರಂದು ಶಿವಂ ಅಸೋಸಿಯೇಟ್ ಕಂಪನಿಯ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿ ಶಿವಾನಂದ್ನ ವಶಕ್ಕೆ ಪಡೆದಿದ್ದರು. ಇದೀಗ ಕಂತೆ ಕಂತೆ ಹಣ ಹೂಡಿಕೆ ಮಾಡಿದ್ದ ಹಣದ ವಂಚನೆ ಸಂಬಂಧ ತನಿಖೆಗಿಳಿದಿದ್ದ ಸಿಐಡಿ ಅಧಿಕಾರಿಗಳು ಮನಿ ರಹಸ್ಯ ಬಿಚ್ಚಿಟ್ಟಿದ್ದಾರೆ.
ಶಿವಾನಂದ ಹೊಸದಾಗಿ ಬಂದ ಹಣವನ್ನು ಹಳೆಯ ಹೂಡಿಕೆದಾರರಿಗೆ ಬಡ್ಡಿ ರೂಪದಲ್ಲಿ ನೀಡುತ್ತಿದ್ದರಂತೆ. ಇದು ಪಾಂಜಿ ಮಾದರಿಯ ವಂಚನೆಯಾಗಿದೆ. ತನಿಖೆಯಲ್ಲಿ ಇದುವರೆಗೆ ಸುಮಾರು 2,400 ಕೋಟಿ ರೂಪಾಯಿ ಹಣವನ್ನು 40,700ಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ 540 ಕೋಟಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಸುಮಾರು 170 ಕೋಟಿ ನಷ್ಟವಾಗಿದೆ ಎಂದು ಸಿಐಡಿ ಮಾಹಿತಿ ನೀಡಿದೆ. ಹಾಗೆ ಈ ಪ್ರಕರಣದಲ್ಲಿ ಸುಮಾರು 660 ಕೋಟಿ ರೂಪಾಯಿ ಹಣದ ಕೊರತೆ ಪತ್ತೆಯಾಗಿದ್ದು, 330 ಕೋಟಿ ರೂಪಾಯಿ ವಸೂಲಿ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನು ನೀಲಣ್ಣನವರ್ ಕಂಪನಿಯಿಂದ ಅಕ್ರಮವಾಗಿ 55 ಕೋಟಿ ರೂಪಾಯಿಯನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದಾರಂತೆ. ಈಗಾಗಲೇ 5 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಇನ್ನೂ 11 ವೋಲ್ವೋ XC90 ಕಾರುಗಳನ್ನು ಖರೀದಿಸಿರುವ ಮಾಹಿತಿ ಸಿಕ್ಕಿದೆ. ಅವುಗಳನ್ನೂ ಜಪ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ FIR ದಾಖಲಾದ ಬಳಿಕವೂ ಕಂಪನಿಯ ಖಾತೆಗಳಿಗೆ ಕೋಟ್ಯಾಂತರ ರೂಪಾಯಿ ಜಮೆಯಾಗಿದ್ದು, 30 ಬ್ಯಾಂಕ್ ಖಾತೆಗಳ ಮಾಹಿತಿ ಪತ್ತೆಯಾಗಿದೆ. 7 ಖಾತೆಗಳಲ್ಲಿ ಭಾರೀ ಪ್ರಮಾಣದ ಹಣ ವರ್ಗಾವಣೆ ನಡೆದಿರುವ ಅನುಮಾನವೂ ವ್ಯಕ್ತವಾಗಿದೆ. ಇದರಲ್ಲಿ ಸಿನಿಮಾ ತಾರೆಯರಿಗೆ ಹಣ ವರ್ಗಾವಣೆ ಆಗಿರುವುದು ಕಂಡುಬಂದರೆ ಅವರಿಗೆ ಹಾಗೆ ಹಣ ಪಡೆದವರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.
ಇನ್ನು, ವಂಚನೆ ಕೇಸ್ ಕುರಿತು, ಬೆಳಗಾವಿಯಲ್ಲಿ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಶಿವಾನಂದ್ ನೀಲಣ್ಣನವರ್ ಮೇಲೆ ಎಫ್ಐಆರ್ ಆದ ಮೇಲೆ ನಾಲ್ಕೈದು ಕೋಟಿ ಹಣ ಡೆಪಾಸಿಟ್ ಆಗಿದೆ. 30 ಅಕೌಂಟ್ ಸಿಕ್ಕಿದ್ದು ಇದರಲ್ಲಿ 7 ಅಕೌಂಟ್ಗಳಲ್ಲಿ ಹೆಚ್ಚಿನ ಹಣ ವರ್ಗಾವಣೆ ಆಗಿದೆ. ಸಿನಿಮಾ ಸ್ಟಾರ್ಗಳಿಗೆ ಅಸೋಸಿಯೇಟ್ನಿಂದ ಹಣ ಹೋಗಿದ್ದರೆ, ಅವರಿಗೂ ನೋಟೀಸ್ ಕೊಟ್ಟು ವಿಚಾರಣೆಗೆ ಒಳಪಡಿಸುತ್ತೇವೆ. ಪಕ್ಕದ ಮಹಾರಾಷ್ಟ್ರದಿಂದ ಅತೀ ಹೆಚ್ಚು ಹೂಡಿಕೆ ಇದೆ. ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.
ರಿಕವರಿ ಬಳಿಕ ಬಡ್ಸ್ ಕಾಯ್ದೆ ಮುಖ್ಯಸ್ಥ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ನೀಡುತ್ತೇವೆ. ಅವರು ಸಾರ್ವಜನಿಕರಿಗೆ ಹಣ ವಾಪಾಸ್ ಕೊಡುತ್ತಾರೆ. ಕಂಪನಿ ಮುಳುಗುವ ಮುನ್ನ ಜಿಲ್ಲಾಡಳಿತ ದಾಳಿ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಸಿಎಂ ಡಿ.ಕೆ. ಶಿವಕುಮಾರ್ ಗೆ ವೀಡಿಯೋ ಕರೆ ಮಾಡಿ ಶುಭಾಶಯ ತಿಳಿಸಿದ ಮಲೇಷ್ಯಾ ಪ್ರಧಾನಿ