newsics.com/ನ್ಯೂಸಿಕ್ಸ್
ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸುವ ವಿದೇಶಿ ನಾಗರಿಕರಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಮಹತ್ವದ ಬದಲಾವಣೆಗಳನ್ನು ಮಾಡಿದೆ.
ಇಮಿಗ್ರೇಶನ್ ಮತ್ತು ಫಾರೆನರ್ಸ್ ರೂಲ್ಸ್-2025 ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದ್ದು, ವಿದೇಶಿಗರ ನೋಂದಣಿ ಅವಧಿಯನ್ನು ಪರಿಷ್ಕರಿಸಲಾಗಿದೆ. ಜೊತೆಗೆ, ವಿದೇಶಿ ಪೋಷಕರಿಗೆ ಭಾರತದಲ್ಲಿ ಜನಿಸುವ ಮಕ್ಕಳ ಕುರಿತ ನಿಯಮಗಳಲ್ಲೂ ಕೆಲವು ಸಡಿಲಿಕೆಗಳನ್ನು ಘೋಷಿಸಲಾಗಿದೆ.
180 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ವೀಸಾದಲ್ಲಿ ಭಾರತಕ್ಕೆ ಆಗಮಿಸುವ ವಿದೇಶಿಯರು, ತಮ್ಮ ವಾಸ್ತವ್ಯವನ್ನು 180 ದಿನಗಳಿಗಿಂತ ಹೆಚ್ಚು ಕಾಲ ವಿಸ್ತರಿಸಲು ಬಯಸಿದರೆ, ಆ 180 ದಿನಗಳ ಅವಧಿ ಮುಗಿಯುವ ಮುನ್ನವೇ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಈ ಹಿಂದೆ ವಿದೇಶಿಯರು ಭಾರತಕ್ಕೆ ಬಂದ 180 ದಿನಗಳ ನಂತರ 14 ದಿನಗಳ ಒಳಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿತ್ತು, ಆದರೆ ಈಗ ಆ ನಿಯಮವನ್ನು ಬದಲಿಸಲಾಗಿದೆ.180 ದಿನಗಳಿಗಿಂತ ಹೆಚ್ಚಿನ ವೀಸಾ ಹೊಂದಿದ್ದರೂ, ಪ್ರತಿ ವಾಸ್ತವ್ಯವು 180 ದಿನಗಳನ್ನು ಮೀರಬಾರದು ಎಂಬ ಷರತ್ತು ಹೊಂದಿರುವವರಿಗೂ ಈ ಹೊಸ ನಿಯಮ ಅನ್ವಯಿಸುತ್ತದೆ. ಅಂತಹವರು ಭಾರತದಲ್ಲಿ ತಮ್ಮ ವಾಸ್ತವ್ಯವನ್ನು ಮುಂದುವರಿಸಲು ಬಯಸಿದರೆ, 180 ದಿನಗಳು ಪೂರ್ಣಗೊಳ್ಳುವ ಮುನ್ನವೇ ನೋಂದಣಿ ಮಾಡಿಕೊಳ್ಳಬೇಕು.
ನಿಗದಿತ ವಾಸ್ತವ್ಯದ ಅವಧಿಯನ್ನು ಮೀರಿ ನೋಂದಣಿ ಮಾಡಿಕೊಳ್ಳಲು ತುರ್ತು ಸಂದರ್ಭಗಳಲ್ಲಿ ಮಾತ್ರ ಅನುಮೋದನೆ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪೋಷಕರಲ್ಲಿ ಒಬ್ಬರು ಭಾರತೀಯ ಪ್ರಜೆಯಾಗಿದ್ದು, ಮಗು ಭಾರತೀಯ ಪೌರತ್ವವನ್ನು ಪಡೆಯಲು ಬಯಸಿದರೆ, ಹಿಂದಿನಂತೆ 30 ದಿನಗಳೊಳಗೆ ನೋಂದಣಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಕಡ್ಡಾಯ ನಿಯಮ ಅನ್ವಯಿಸುವುದಿಲ್ಲ.
ಆದರೆ, ಮಗು ನಂತರದ ದಿನಗಳಲ್ಲಿ ಬೇರೆ ದೇಶದ ಪೌರತ್ವವನ್ನು ಪಡೆದರೆ, ವಿದೇಶಿ ಪೌರತ್ವ ಪಡೆದ 30 ದಿನಗಳೊಳಗೆ ಪೋಷಕರು ನೋಂದಣಿ ಅಧಿಕಾರಿಗೆ ಮಾಹಿತಿ ನೀಡಬೇಕು.
ಜೊತೆಗೆ, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ವಿದೇಶಿ ಪ್ರಜೆಗಳಿಗೆ ಚಿಕಿತ್ಸೆ ಅಥವಾ ವಸತಿ ಕಲ್ಪಿಸುವ ಕುರಿತಾದ ವರದಿ ಮಾಡುವ ಪ್ರಕ್ರಿಯೆಗಳಲ್ಲೂ ಸರ್ಕಾರ ಬದಲಾವಣೆ ತಂದಿದೆ.