newsics.com | ನ್ಯೂಸಿಕ್ಸ್
ತೆಲಂಗಾಣ: ಸಾಮಾನ್ಯವಾಗಿ ದಿನವಿಡೀ ದುಡಿದು ಸುಸ್ತಾದ ಜನರಿಗೆ ಸಂಜೆಯ ಸಮಯವೇ ಒಂದು ದೊಡ್ಡ ರಿಲ್ಯಾಕ್ಸೇಷನ್. ಸ್ನೇಹಿತರ ಜೊತೆ ಹರಟೆ, ಸಂಗಾತಿಯೊಂದಿಗೆ ಲಾಂಗ್ ಡ್ರೈವ್, ಪಾರ್ಕ್‌ನಲ್ಲಿ ಮಕ್ಕಳಾಟ.. ಹೀಗೆ ಸಂಜೆಯ ಅಂದವನ್ನು ಆಸ್ವಾದಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಭಾರತದಲ್ಲೇ ಇರುವ ಒಂದು ಅಪರೂಪದ ಹಳ್ಳಿಯ ಜನರಿಗೆ ಈ ಸುಂದರ ಸಂಜೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯವೇ ಇಲ್ಲ! ಹೌದು, ಅಲ್ಲಿ ಸಂಜೆ 4 ಗಂಟೆಯಾಗುತ್ತಿದ್ದಂತೆ ಇಡೀ ಗ್ರಾಮ ಕತ್ತಲ ಗೂಡಾಗಿಬಿಡುತ್ತದೆ. ಜನರು 4 ಗಂಟೆಗೆಲ್ಲಾ ರಾತ್ರಿಯ ಊಟ ಮುಗಿಸಿ ಮಲಗಿಬಿಡುತ್ತಾರೆ.
ಎಲ್ಲಿದೆ ಈ ವಿಚಿತ್ರ ಗ್ರಾಮ?
ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಮಂಡಲದಲ್ಲಿರುವ ‘ಕೊಡುರುಪಾಕ’ ಎನ್ನುವುದೇ ಆ ಸುಂದರ ಹಾಗೂ ವಿಸ್ಮಯಕಾರಿ ಹಳ್ಳಿ. ನಮ್ಮ ನಾಡಿನಲ್ಲಿ ಸೂರ್ಯ ಮುಳುಗಿ ಕತ್ತಲಾಗಲು ಕನಿಷ್ಠ 6 ರಿಂದ 6.30 ಆಗಬೇಕು. ಆದರೆ ಈ ಕೊಡುರುಪಾಕ ಗ್ರಾಮದಲ್ಲಿ ಮಧ್ಯಾಹ್ನ 3.30 ದಾಟುತ್ತಿದ್ದಂತೆ ಸಂಜೆಯ ವಾತಾವರಣ ನಿರ್ಮಾಣವಾಗಿ, 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು ಆವರಿಸಿಬಿಡುತ್ತದೆ.
ಪ್ರಕೃತಿಯ ಈ ಆಟಕ್ಕೆ ಕಾರಣವೇನು?
ಇದು ಯಾವುದೇ ಶಾಪ ಅಥವಾ ಮಾಟ-ಮಂತ್ರವಲ್ಲ, ಸಂಪೂರ್ಣವಾಗಿ ಭೌಗೋಳಿಕ ಹಿನ್ನೆಲೆಯ ಪ್ರಕೃತಿಯ ಆಟ. ಈ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ‘ರಂಗನಾಯಕುಲ ಗುಟ್ಟ’ ಮತ್ತು ‘ಗೋರ್ಲಾ ಗುಟ್ಟ’ ಎಂಬ ಬೃಹತ್ ಗಾತ್ರದ ಎತ್ತರದ ಬೆಟ್ಟಗಳಿವೆ. ಮಧ್ಯಾಹ್ನ 3.30ರ ನಂತರ ಸೂರ್ಯ ಪಶ್ಚಿಮಕ್ಕೆ ವಾಲುತ್ತಿದ್ದಂತೆ, ಈ ಬೃಹತ್ ಬೆಟ್ಟಗಳು ಗೋಡೆಯಂತೆ ಅಡ್ಡ ನಿಂತು ಸೂರ್ಯನ ಬೆಳಕನ್ನು ತಡೆಯುತ್ತವೆ. ಹೀಗಾಗಿ ಬೆಟ್ಟಗಳ ದೈತ್ಯ ನೆರಳು ಇಡೀ ಗ್ರಾಮವನ್ನು ಆವರಿಸುತ್ತದೆ. ಸಾಮಾನ್ಯವಾಗಿ ನಮಗೆ ದಿನಕ್ಕೆ 12 ಗಂಟೆಗಳ ಕಾಲ ಸೂರ್ಯನ ಬೆಳಕು ಸಿಕ್ಕರೆ, ಈ ಹಳ್ಳಿಯ ಜನರಿಗೆ ಮಾತ್ರ ಕೇವಲ 9 ಗಂಟೆಗಳ ಕಾಲವಷ್ಟೇ ಸೂರ್ಯನ ದರ್ಶನವಾಗುತ್ತದೆ.
ಬೆಳಗ್ಗೆಯೂ ನಿಧಾನ, ರಾತ್ರಿಯೂ ಬೇಗ
ಈ ಹಳ್ಳಿಯಲ್ಲಿ ಕೇವಲ ಸಂಜೆ ಮಾತ್ರ ಬೇಗ ಬರುವುದಿಲ್ಲ, ಬದಲಿಗೆ ಬೆಳಗ್ಗೆಯೂ ಸೂರ್ಯ ತಡವಾಗಿಯೇ ಕಾಣಿಸಿಕೊಳ್ಳುತ್ತಾನೆ. ದೇಶದ ಇತರೆಡೆ ಬೆಳಕಾದ ಅರ್ಧ ಗಂಟೆಯ ನಂತರ ಬೆಟ್ಟಗಳನ್ನು ಸೀಳಿಕೊಂಡು ಸೂರ್ಯನ ಕಿರಣಗಳು ಈ ಊರೊಳಗೆ ಪ್ರವೇಶಿಸುತ್ತವೆ. ಹೀಗಾಗಿ ಈ ಭೌಗೋಳಿಕ ಬದಲಾವಣೆಗೆ ತಕ್ಕಂತೆ ಗ್ರಾಮಸ್ಥರು ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ.
4 ಗಂಟೆಗೆಲ್ಲಾ ಊಟ ಮುಗಿಸಿ ನಿದ್ದೆಗೆ ಜಾರುವ ಜನ
ಮಧ್ಯಾಹ್ನ ಮೂರೂವರೆಗೇ ಕತ್ತಲಾಗುವ ಕಾರಣ ಇಲ್ಲಿನ ರೈತರು, ಕಾರ್ಮಿಕರು ಹಾಗೂ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಬೆಳಗ್ಗೆ ಬೇಗ ಎದ್ದು ತಮ್ಮ ಕೆಲಸಗಳನ್ನು ಆರಂಭಿಸುತ್ತಾರೆ. ಮಧ್ಯಾಹ್ನದ ಒಳಗಾಗಿ ಎಲ್ಲವನ್ನೂ ಮುಗಿಸಿ ಮನೆಗೆ ವಾಪಸಾಗುತ್ತಾರೆ. ಸಂಜೆ 4 ಗಂಟೆಯಾಗುತ್ತಿದ್ದಂತೆ ದೀಪ ಹಚ್ಚಿ, ರಾತ್ರಿಯ ಊಟವನ್ನು ಮುಗಿಸಿ ನಿದ್ದೆಗೆ ಜಾರುತ್ತಾರೆ. ಪ್ರಕೃತಿಯ ಈ ಅಪರೂಪದ ವಿದ್ಯಮಾನ ಹಾಗೂ ಜನರ ವಿಭಿನ್ನ ಜೀವನ ಶೈಲಿಯನ್ನು ಕಣ್ತುಂಬಿಕೊಳ್ಳಲು ದಿನನಿತ್ಯ ನೂರಾರು ಪ್ರವಾಸಿಗರು ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.
Chardham Yatra Updates | ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಉತ್ತರಾಖಂಡ ಸರ್ಕಾರ